ಚಿಕ್ಕೋಡಿ: ಲಾಕ್‌ಡೌನ್ ಹಿನ್ನೆಲೆ ತುತ್ತು ಅನ್ನಕ್ಕಾಗಿ ಕಳೆದ 45 ದಿನಗಳಿಂದ ಗಡಿಯ ಅರಣ್ಯ ಪ್ರದೇಶದಲ್ಲೇ ಸಿಲುಕಿಕೊಂಡಿರುವ 10 ಕುಟುಂಬಗಳ 47 ಜನರು ಪರದಾಡುತ್ತಿದ್ದಾರೆ.
ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿರುವ ನಂದಗಡ ತಾಲೂಕಿನ ತೆವುರವಾಡಿ ಗ್ರಾಮದಲ್ಲಿ ಸಿಲುಕಿರುವ ಮಧ್ಯಪ್ರದೇಶದ ಅಲೆಮಾರಿಗಳಾದ ಇವರು, ಗೋವಾದಿಂದ ಮಧ್ಯಪ್ರದೇಶದ ಜಬಲ್ಪೂರ್ ಜಿಲ್ಲೆಗೆ ಹೊರಟು, ಕಾಲ್ನಡಿಗೆಯಲ್ಲಿ ರಾಜ್ಯದ ಗಡಿಯವರೆಗೆ ಬಂದಿದ್ದಾರೆ. ಲಾಕ್‌ಡೌನ್ ಜಾರಿ ಹಿನ್ನೆಲೆ ಈ ಗ್ರಾಮದ ಬಳಿಯೇ ಸಿಲುಕಿದ್ದಾರೆ.
ಮಹಾರಾಷ್ಟ್ರದ ತೆವುರವಾಡಿ ಗ್ರಾಮದ ಹೊರವಲಯದ ಅರಣ್ಯದಲ್ಲೇ ಉಳಿದ ಮಕ್ಕಳು, ವೃದ್ಧರು ಸೇರಿದಂತೆ 47 ಜನರು ಗೋವಾದ ಊರುಗಳಿಗೆ ತೆರಳಿ ವನಸ್ಪತಿ, ಜೇನುತುಪ್ಪ ಮಾರಾಟ ಹಾಗೂ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಆದರೆ ಈ ಕೊರೊನಾ ಭೀತಿ ಹಿನ್ನೆಲೆ ಗ್ರಾಮಕ್ಕೆ ಯಾರೂ ಕೂಡ ಇವರನ್ನು ಸೇರಿಸುತ್ತಿಲ್ಲ. ಹೀಗಾಗಿ ಅರಣ್ಯದಲ್ಲೇ ಹಣ್ಣು, ಕಾಯಿ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ ಈ ಬಡಪಾಯಿಗಳು.
ಆಹಾರವಿಲ್ಲದೇ ಅಲೆಮಾರಿ ಮಕ್ಕಳು, ವೃದ್ಧರು, ಮಹಿಳೆಯರು ಪರಾದಾಡುತ್ತಿದ್ದು, ಜಿಲ್ಲೆಯ ಹುಕ್ಕೇರಿ ಪಟ್ಟಣ ಹಾಗೂ ಗಡಿ ಗ್ರಾಮಗಳ ಜನರು ಆಹಾರ ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ನಮ್ಮನ್ನು ನಮ್ಮೂರಿಗೆ ಕಳುಹಿಸಿ ಎಂದು ಪರಿ ಪರಿಯಾಗಿ ಮನವಿ ಮಾಡಿಕೊಂಡಿದ್ದಾರೆ.