ಬೆಳಗಾವಿ: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ವನ್ಯಜೀವಿಗಳ ಆಹಾರದ ಕ್ರಮವೇ ಬದಲಾಗಿದ್ದು, ಮೃಗಾಲಯ ಅಧಿಕಾರಿಗಳಿಗೆ ಹೊಸ ಸಮಸ್ಯೆ ಎದುರಾಗಿದೆ.
ಭಾರತೀಯ ಮೃಗಾಲಯ ಪ್ರಾಧಿಕಾರ ಹಾಗೂ ಪ್ರಾಣಿಗಳ ನೈತಿಕ ನಿರ್ವಹಣೆ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ವಿರುದ್ಧವಾಗಿ ಇಲ್ಲಿನ ರಾಣಿಚೆನ್ನಮ್ಮ ಮೃಗಾಲಯದಲ್ಲಿನ ವನ್ಯಪ್ರಾಣಿಗಳನ್ನು ನಡೆಸಿಕೊಳ್ಳಲಾಗುತ್ತಿದೆ. ಈ ಸಂಗತಿಯನ್ನು ಬೆಳಗಾವಿಯ ಅರಣ್ಯಾಧಿಕಾರಿಗಳು ಪರೋಕ್ಷವಾಗಿ ಒಪ್ಪಿಕೊಳ್ಳುತ್ತಿದ್ದಾರೆ.
ಗೋಹತ್ಯೆ ನಿಷೇಧದಿಂದ 4 ದಿನಗಳ ಹಿಂದೆ ಬೆಳಗಾವಿಯ ಮೃಗಾಲಯಕ್ಕೆ ಬಂದಿರುವ 3 ಸಿಂಹಗಳ ಆಹಾರ ಕ್ರಮದಲ್ಲಿ ವ್ಯತ್ಯಾಸವಾಗುತ್ತಿದೆ. ಪೌಷ್ಟಿಕಾಹಾರ ಸಿಗದೇ ಮೂರು ಸಿಂಹಗಳು ಮೂಕರೋದನೆ ಅನುಭವಿಸುತ್ತಿವೆ.
ಪ್ರಾಧಿಕಾರದ ನಿರ್ದೇಶನವೇನು?
ಭಾರತೀಯ ಮೃಗಾಲಯ ಪ್ರಾಧಿಕಾರದ ನಿರ್ದೇಶನದ ಪ್ರಕಾರ ಸಿಂಹ, ಚಿರತೆ, ಹುಲಿ ಸೇರಿದಂತೆ ಇನ್ನಿತರ ವನ್ಯಜೀವಿಗಳಿಗೆ ಆಕಳು, ಎತ್ತು, ಕೋಣ ಮತ್ತು ಎಮ್ಮೆಯ ಮೌಂಸ ನೀಡಬೇಕು. ಈ ರೀತಿಯ ಆಹಾರ ನೀಡದಿದ್ದರೆ ವನ್ಯಜೀವಿಗಳಿಗೆ ಪೌಷ್ಟಿಕಾಂಶ ಕೊರತೆ ಆಗಬಹುದು ಎಂಬುವುದನ್ನು ಸುಪ್ರೀಂಕೋರ್ಟ್ ತನ್ನ ಹಿಂದಿನ ತೀರ್ಪಿನಲ್ಲಿ ತಿಳಿಸಿದೆ. ಆದರೆ ರಾಜ್ಯದಲ್ಲಿ ಜಾರಿಯಾಗಿರುವ ಗೋಹತ್ಯೆ ನಿಷೇಧ ಕಾನೂನಿನಿಂದ ವನ್ಯಜೀವಿಗಳಿಗೆ ಸೂಕ್ತ ಆಹಾರದ ಕೊರತೆ ಎದುರಾಗಿದೆ.
ಕೋಳಿಮೌಂಸ ಸವಿಯಲು ಹಿಂದೇಟು
ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಮೂರು ಸಿಂಹಗಳನ್ನು ಫೆ. 25ರಂದು ಇಲ್ಲಿನ ಮೃಗಾಲಯಕ್ಕೆ ತರಲಾಗಿದೆ. 20 ದಿನಗಳ ಕಾಲ ಮೂರು ಸಿಂಹಗಳನ್ನು ಕ್ವಾರಂಟೈನ್ ಮಾಡಲಾಗಿದೆ.
ಪ್ರೇಕ್ಷಾ-ಗಣೇಶ ಎಂಬ ಸಿಂಹಗಳಿಗೆ ಜನಿಸಿದ ನಕುಲ, ಕೃಷ್ಣ ಹಾಗೂ ನಿರುಪಮ ಎಂಬ ಹೆಸರಿನ ಮೂರು ಸಿಂಹಗಳನ್ನು ಬೆಳಗಾವಿಯ ಭೂತರಾಮನಹಟ್ಟಿ ಮೃಗಾಲಯಕ್ಕೆ ಕರೆತರಲಾಗಿದೆ.
ಈ ಮೂರು ಸಿಂಹಗಳು 2010 ಫೆ. 12ರಂದು ಜನಿಸಿವೆ. ಗೋಹತ್ಯೆ ನಿಷೇಧದ ಕಾರಣ ಈ ಮೂರು ಸಿಂಹಗಳಿಗೆ ನಿತ್ಯ ಕೋಳಿ ಮಾಂಸ ನೀಡಲಾಗುತ್ತಿದೆ. ಆಹಾರದಲ್ಲಿನ ವ್ಯತ್ಯಾಸದಿಂದ ಮೂರು ಸಿಂಹಗಳು ಕೋಳಿಮೌಂಸ ಸೇವಿಸಲು ಹಿಂದೇಟು ಹಾಕುತ್ತಿವೆ. ಬನ್ನೇರುಘಟ್ಟದಲ್ಲಿ ನಿತ್ಯ 10 ಕೆ.ಜಿ ದನದ ಮೌಂಸ ಸೇವಿಸುತ್ತಿದ್ದ ಈ ಪ್ರಾಣಿಗಳು ಇದೀಗ 3 ಕೆ.ಜಿಯಷ್ಟೂ ಕೋಳಿಮೌಂಸ ಸೇವಿಸುತ್ತಿಲ್ಲ.
ರಿಯಾಯಿತಿ ನೀಡುವಂತೆ ಸರ್ಕಾರಕ್ಕೆ ಪತ್ರ
ಭಾರತೀಯ ಮೃಗಾಲಯ ಪ್ರಾಧಿಕಾರ ನಿರ್ದೇಶನದ ಅನ್ವಯ ವನ್ಯಜೀವಿಗಳಿಗೆ ಆಹಾರ ಪೂರೈಸಬೇಕಿದೆ. ಈ ಕಾರಣಕ್ಕೆ ಪ್ರಾಣಿಸಂಗ್ರಹಾಲಯದ ವನ್ಯಜೀವಿಗಳ ಆರೋಗ್ಯದ ಹಿತದೃಷ್ಟಿಯಿಂದ ನೂತನ ಗೋಹತ್ಯೆ ಕಾನೂನಿನಡಿ ರಿಯಾಯಿತಿ ನೀಡಬೇಕು ಎಂದು ರಾಜ್ಯ ಮೃಗಾಲಯ ಪ್ರಾಧಿಕಾರದ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಸರ್ಕಾರದ ಮಟ್ಟದಲ್ಲಿ ತೀರ್ಮಾನ ಆಗುವವರೆಗೂ ರಾಜ್ಯದ ಮೃಗಾಲಯದಲ್ಲಿರುವ ವನ್ಯಜೀವಿಗಳು ನಿತ್ಯ ಕೋಳಿಮಾಂಸವನ್ನೇ ಸೇವಿಸಬೇಕಿದೆ.
ಇದನ್ನೂ ಓದಿ: 1 ರಿಂದ 5ನೇ ತರಗತಿ ಆರಂಭ ಯಾವಾಗ: ಸಚಿವರು ಹೇಳಿದ್ದೇನು?