ಬೆಳಗಾವಿ: ಇಲ್ಲಿನ ಭೂತರಾಮನಹಟ್ಟಿ ಮೃಗಾಲಯಕ್ಕೆ ಮೂರು ಸಿಂಹಗಳಿಂದು ಆಗಮಿಸಿವೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಇಲ್ಲಿನ ಮೃಗಾಲಯಕ್ಕೆ ಸಿಂಹಗಳನ್ನು ತಂದು ಬಿಡಲಾಗಿದೆ. ಇಂದು ಮಧ್ಯಾಹ್ನವೇ ಸಿಂಹಗಳು ಭೂತರಾಮನಹಟ್ಟಿ ಮೃಗಾಲಯ ಸೇರಿವೆ.
ನಿನ್ನೆ ರಾತ್ರಿಯೇ ವಿಶೇಷ ವಾಹನಗಳಲ್ಲಿ ಬನ್ನೇರುಘಟ್ಟದಿಂದ ಹೊರಟಿದ್ದ ಸಿಂಹಗಳು ಇಂದು ಮಧ್ಯಾಹ್ನ ಬೆಳಗಾವಿಯ ಮೃಗಾಲಯಕ್ಕೆ ಆಗಮಿಸಿವೆ. ಈ ವಿಷಯವನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಪ್ರೇಕ್ಷಾ-ಗಣೇಶ ಎಂಬ ಸಿಂಹಗಳಿಗೆ ಜನಿಸಿದ ನಕುಲ, ಕೃಷ್ಣಾ ಹಾಗೂ ನಿರುಪಮ ಎಂಬ ಹೆಸರಿನ ಮೂರು ಸಿಂಹಗಳನ್ನು ಈಗ ಬೆಳಗಾವಿಯ ಭೂತರಾಮನಹಟ್ಟಿ ಮೃಗಾಲಯಕ್ಕೆ ತರಲಾಗಿದೆ. ಈ ಮೂರು ಸಿಂಹಗಳು 2010 ಫೆ. 12ರಂದು ಜನಿಸಿವೆ. ಶೀಘ್ರದಲ್ಲೇ ವೀಕ್ಷಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.
ಈ ಕುರಿತು ಈಟಿವಿ ಭಾರತ ಜೊತೆಗೆ ಮಾತನಾಡಿದ ಡಿಎಫ್ಒ ಅಮರನಾಥ, ಇಲ್ಲಿನ ಭೂತರಾಮನಹಟ್ಟಿ ಮೃಗಾಲಯಕ್ಕೆ ಮೂರು ಸಿಂಹಗಳು ಬಂದಿಳಿದಿವೆ. ಆರೋಗ್ಯ ತಪಾಸಣೆ ಬಳಿಕ ಸಿಂಹಗಳನ್ನು ಮೃಗಾಲಯಕ್ಕೆ ಸೇರಿಸಿಕೊಳ್ಳಲಾಗಿದೆ. ಶೀಘ್ರವೇ ಪ್ರವಾಸಿಗರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು ಎಂದರು.