ಬೆಳಗಾವಿ: ಸಿಎಂ ಬೊಮ್ಮಾಯಿ ಅವರು ಡಿ.19ರೊಳಗೆ ಹಿಂದುಳಿದ ವರ್ಗದ ಆಯೋಗದ ವರದಿ ಪಡೆದು ಮೀಸಲಾತಿ ಘೋಷಣೆ ಮಾಡೋದಾಗಿ ಹೇಳಿದ್ದಾರೆ. ಬೆಳಗಾವಿಯ ಸುವರ್ಣಸೌಧಕ್ಕೆ ಬರುವ ಮೊದಲು ಮೀಸಲಾತಿ ಘೋಷಣೆ ಮಾಡಬೇಕು. ಯಾವುದೇ ಕಾರಣಕ್ಕೂ ಡಿಸೆಂಬರ್ 19ರ ಗಡುವು ತಪ್ಪಬಾರದು. ಡಿ. 19ರೊಳಗೆ ಮೀಸಲಾತಿ ಘೋಷಿಸದಿದ್ರೆ ಡಿ.22ರಂದು 25ಲಕ್ಷ ಜನರನ್ನು ಸೇರಿಸಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುತ್ತದೆ ಎಂದು ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಬೈಲಹೊಂಗಲ ಪಟ್ಟಣದಲ್ಲಿ ಹಮ್ಮಿಕೊಂಡ ಲಿಂಗಾಯತ ಪಂಚಮಸಾಲಿ ಸಮಾವೇಶದಲ್ಲಿ ಮಾತನಾಡಿದ ಅವರು, ಬೈಲಹೊಂಗಲಕ್ಕೆ ಮೊದಲ ಬಾರಿ ಬಂದು ಸಮಾವೇಶ ಮಾಡ್ತಿದ್ದೇವೆ. ಕಿತ್ತೂರು ನಾಡಿನಲ್ಲಿ ಪ್ರಪ್ರಥಮ ಪಂಚಮಸಾಲಿ ಸಮಾವೇಶ ಉದ್ಘಾಟನೆ ಮಾಡಿದ್ದೇವೆ. ಬಸವಣ್ಣ ಲಿಂಗೈಕ್ಯವಾದ ಕೂಡಲಸಂಗಮದಷ್ಟು ಚನ್ನಮ್ಮ ತಾಯಿ ಲಿಂಗೈಕ್ಯರಾದ ಬೈಲಹೊಂಗಲವೂ ಪವಿತ್ರ ಕ್ಷೇತ್ರವಾಗಿದೆ ಎಂದರು.
ಬಹುಸಂಖ್ಯಾತ ಪಂಚಮಸಾಲಿಗಳನ್ನು ಬಳಸಿಕೊಂಡು ಬೆಂಗಳೂರಲ್ಲಿ ಕೆಲವು ಲಿಂಗಾಯತರು ಸಿಎಂ ಆಗಿದ್ದಾರೆ. ಸಿಎಂ ಸ್ವತಃ ತಾವೇ ಡೆಡ್‌ಲೈನ್ ಕೊಟ್ಟಿದ್ದಾರೆ. ಡಿ.19ರೊಳಗೆ ಹಿಂದುಳಿದ ವರ್ಗದ ಆಯೋಗದ ವರದಿ ಪಡೆದು ಮೀಸಲಾತಿ ಘೋಷಣೆ ಮಾಡೋದಾಗಿ ಹೇಳಿದ್ದಾರೆ. ಬೆಳಗಾವಿಯ ಸುವರ್ಣಸೌಧಕ್ಕೆ ಬರುವ ಮೊದಲು ಸಿಎಂ ಮೀಸಲಾತಿ ಘೋಷಣೆ ಮಾಡಬೇಕು.
ಡಿಸೆಂಬರ್ 22ರಂದು ನಡೆಯುವುದು ಅಂತಿಮ ಹೋರಾಟ, ಮೀಸಲಾತಿ ಕೊಟ್ರೆ ಈ ಸರ್ಕಾರವೇ ಕೊಡಬೇಕು. ಎಲೆಕ್ಷನ್ ಬಂದ್ರೆ ಮತ್ತೆ ಮೊದಲಿಂದ ಶುರುವಾಗುತ್ತದೆ. ಮೀಸಲಾತಿ ಕೊಟ್ಟರೆ ಸಿಎಂ ನಮ್ಮ ಪಾಲಿನ ಅಂಬೇಡ್ಕರ್ ಆಗ್ತಾರೆ ಎಂದು ಬೈಲಹೊಂಗಲ ಪಂಚಮಸಾಲಿ ಸಮಾವೇಶದಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಬೈಲಹೊಂಗಲ ತಾಲೂಕಿನಲ್ಲಿ ಕೂಡಲಸಂಗಮ ಶ್ರೀಗಳು ತಿರುಗಾಡಿದಷ್ಟು ಎಲ್ಲಿಯೂ ತಿರುಗಾಡಿಲ್ಲ. ನಮ್ಮ ಈ ಹೋರಾಟಕ್ಕೆ ಬೈಲಹೊಂಗಲದಲ್ಲಿ 12 ವರ್ಷಗಳ ಹಿಂದೆಯೇ ಚಾಲನೆ ನೀಡಲಾಗಿದೆ. ಕಳೆದ ಎರಡು ವರ್ಷಗಳಿಂದ ಈ ಹೋರಾಟ ತೀವ್ರ ಸ್ವರೂಪ ಪಡೆದಿದೆ. ಪಂಚಮಸಾಲಿ ಸಮಾಜ ಈ ರಾಜ್ಯದಲ್ಲಿ ಅತಿದೊಡ್ಡ ಸಮಾಜವಾಗಿದೆ. ಆದ್ರೆ ಈ ಸಮಾಜದಲ್ಲಿಯೂ ಬಡತನ ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಯ ಬಂಧನ