ಬೆಳಗಾವಿ: ಕಳೆದ 23 ದಿನಗಳಿಂದ ಕುಂದಾನಗರಿ ಬೆಳಗಾವಿ ಜನರ ನಿದ್ದೆಗೆಡಿಸಿರುವ ಚಿರತೆ ಇನ್ನೂ ಪತ್ತೆಯಾಗಿಲ್ಲ. ಶಿವಮೊಗ್ಗದ ಸಕ್ರೆಬೈಲು ಆನೆ ಶಿಬಿರದಿಂದ ಎರಡು ಆನೆಗಳನ್ನು ತಂದು ಶೋಧ ನಡೆಸಿದರೂ ಅರಣ್ಯ ಸಿಬ್ಬಂದಿಗೆ ಚಿರತೆ ದರ್ಶನ ಕೊಟ್ಟು ಮಿಂಚಿನಂತೆ ಮರೆಯಾಗುತ್ತಿದೆ. ಇದು ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ಕಳೆದ 22 ದಿನಗಳ ಹಿಂದೆ ಜಾಧವ್ ನಗರದ ಕಟ್ಟಡ ಕಾರ್ಮಿಕನ ಮೇಲೆ ದಾಳಿ ನಡೆಸಿ ಗಾಲ್ಫ್ ಮೈದಾನ ಸೇರಿದ ಚಿರತೆ, ಅರಣ್ಯ ಇಲಾಖೆಗೆ ಚಳ್ಳೆಹಣ್ಣು ತಿನ್ನಿಸುತ್ತಿದೆ. ಕುಂದಾನಗರಿ ಬೆಳಗಾವಿಯಲ್ಲಿ ಚಿರತೆ ಪ್ರತ್ಯಕ್ಷವಾಗಿ ಇಂದಿಗೆ 23 ದಿನಗಳು ಕಳೆದಿದೆ. ಆದರೂ ಅರಣ್ಯ ಸಿಬ್ಬಂದಿ ಕೈಗೆ ಚಿರತೆ ಸಿಗುತ್ತಿಲ್ಲ. ಪರಿಣಾಮ, ನಗರದ ಪ್ರದೇಶದ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಆಪರೇಷನ್ ಹನಿಟ್ರ್ಯಾಪ್: ಶೋಧ ಕಾರ್ಯಾಚರಣೆ ನಡೆಸುತ್ತಿರುವ ಸಿಬ್ಬಂದಿಗೆ ದರ್ಶನ ನೀಡಿ ಚಳ್ಳೆಹಣ್ಣು ತಿನ್ನಿಸಿ ಮಿಂಚಿನಂತೆ ಮರೆಯಾಗುತ್ತಿರುವ ಚಾಲಾಕಿ ಚಿರತೆ ಸೆರೆಗೆ ಅತ್ಯಾಧುನಿಕ ಡ್ರೋನ್ , ಶಿಕಾರಿ ನಾಯಿ, ಹಂದಿ ಬಲೆ ಬಳಸಿದ್ದಾಯ್ತು, ಆಪರೇಷನ್ ಗಜೆ ಪಡೆ ಜೊತೆ ಆಪರೇಷನ್ ಹನಿಟ್ರ್ಯಾಪ್ ಸಹ ಮಾಡಲಾಗಿದೆ. ಗಾಲ್ಫ್ ಮೈದಾನದಲ್ಲಿ ಪ್ರತ್ಯಕ್ಷವಾಗಿರುವ ಚಿರತೆ ಮೇಲ್ನೋಟಕ್ಕೆ ಗಂಡು ಚಿರತೆ ಎಂಬ ಶಂಕೆ ಇದೆ. ಈ ಕಾರಣಕ್ಕೆ ಬೋನುಗಳಿಗೆ ಹೆಣ್ಣು ಚಿರತೆಯ ಮೂತ್ರ ಸಿಂಪಡಣೆ ಮಾಡಲಾಗುತ್ತಿದೆ.
ಇದಕ್ಕಾಗಿ ಭೂತರಾಮನಹಟ್ಟಿ ಕಿರುಮೃಗಾಲಯದ 2 ಹೆಣ್ಣು ಚಿರತೆಯ ಮೂತ್ರ ತರಲಾಗಿದೆ. ಇದನ್ನು ಗಾಲ್ಫ್ ಮೈದಾನದಲ್ಲಿ ಸಿಂಪಡಿಸಲಾಗಿದೆ. ಗಾಲ್ಫ್ ಮೈದಾನದ ಗೇಟ್ ನಂಬರ್ 4ರಲ್ಲಿ ನಿನ್ನೆ ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿವೆ. ಟ್ರ್ಯಾಪ್ ಕ್ಯಾಮರಾ 3 ರಲ್ಲಿ ಚಿರತೆಯ ಚಲನವಲನ ಸೆರೆಯಾಗಿದೆ. ಈ ನಡುವೆ ಗಜಪಡೆ ಕಾರ್ಯಾಚರಣೆಯೂ ಮುಂದುವರೆದಿದೆ.
ಇದನ್ನೂ ಓದಿ: ಬೆಳಗಾವಿ ಆಪರೇಷನ್ ಚಿರತೆ ಕಾರ್ಯಾಚರಣೆಗೆ ತೆರಳಿದ ಸಕ್ರೆಬೈಲ್ ಅಲೆ, ನೇತ್ರಾವತಿ ಆನೆಗಳು
ಕಣ್ಣಿಗೆ ಕಂಡರೂ ಕೈಗೆ ಸಿಗದ ಚಿರತೆ : ಅರಣ್ಯ ಇಲಾಖೆ ಸಿಬ್ಬಂದಿ ಕಣ್ಣಿಗೆ ಕಂಡರೂ ಕೈಗೆ ಸಿಗದ ಚಿರತೆ ಬಗ್ಗೆ ನೆಟ್ಟಿಗರು ವ್ಯಂಗ್ಯವಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯಭರಿತ ಪೋಸ್ಟ್ ಹಾಕುತ್ತಿದ್ದಾರೆ. ಚಿರತೆ ಕುರಿತಾದ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ. 'ನಾ ಅಂತೂ ಬೆಳಗಾವಿ ಬಿಟ್ಟು ಹೋಗಲ್ಲ. ಯಾರಪ್ಪಂದ ಏನೈತಿ, ಬೆಳಗಾವಿ ನಂದೈತಿ',
'ಈ ಬಾರಿ ಬೆಳಗಾವಿ ಗಣೇಶೋತ್ಸವ ಮುಗಿಸಿಯೇ ನಾನು ಹೋಗೋದು'. 'ಬೆಳಗಾವಿಯ ಗಾಳಿ, ನೀರು ಚೆನ್ನಾಗಿದೆ ಕುಟುಂಬ ಸಮೇತ ಇಲ್ಲೇ ಶಿಫ್ಟ್ ಆಗ್ತೇನೆ'. 'ಏನ್ ಮಾಡ್ಕೋತಿ ಮಾಡ್ಕೋ.. ರಾಜ್ಯೋತ್ಸವಕ್ಕೆ ಚನ್ನಮ್ಮ ಸರ್ಕಲ್ ದಾಗ ಒಂದ್ ರೌಂಡ್ ಡ್ಯಾನ್ಸ್ ಮಾಡಿ ಹೋಗಾಂವ'. ಈ ರೀತಿ ವಿವಿಧ ಬರಹ ಬರೆದು ಚಿರತೆ ಫೋಟೋ ಹಾಕಿ ಪೋಸ್ಟ್ ಮಾಡಲಾಗುತ್ತಿದೆ.
ಚಿರತೆ ಹೆಸರಿನಲ್ಲಿ ಆಧಾರ್ ಕಾರ್ಡ್: ಚಿರತೆ ಹೆಸರಿನಲ್ಲಿ ಆಧಾರ್ ಕಾರ್ಡ್ ಮಾದರಿ ಸಹ ಎಡಿಟ್ ಮಾಡಿ ಅಪ್‌ಲೋಡ್ ಮಾಡಲಾಗಿದೆ. ರೇಸ್‌ಕೋರ್ಸ್ ವಿಳಾಸ ಹಾಕಿ ಆಧಾರ್ ಕಾರ್ಡ್ ಮಾದರಿಯನ್ನು ನೆಟಿಜನ್ಸ್ ಪೋಸ್ಟ್ ಮಾಡಿದ್ದಾರೆ. ಇನ್ನೂ ಗಾಲ್ಫ್ ಮೈದಾನದ ಒಂದು ಕಿಲೋಮೀಟರ್ ವ್ಯಾಪ್ತಿಯ 22 ಸರ್ಕಾರಿ, ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ರಜೆ ಮುಂದುವರಿದಿದೆ.
ಆನ್‌ಲೈನ್‌ನಲ್ಲಿ ಪಾಠ ಹೇಳುವಂತೆ ಸೂಚನೆ ನೀಡಲಾಗಿದೆಯಾದರೂ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸೂಕ್ತ ವ್ಯವಸ್ಥೆ ಇಲ್ಲದೇ ಕಂಗಾಲಾಗಿದ್ದಾರೆ. ವೈಜ್ಞಾನಿಕ ರೀತಿ ಕಾರ್ಯಾಚರಣೆ ನಡೆಯುತ್ತಿಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸುತ್ತಿರುವ ಸಾರ್ವಜನಿಕರು, ಹೆಚ್ಚಿನ ಸಿಬ್ಬಂದಿ ಬಳಸಿ ಶೋಧ ಕಾರ್ಯಾಚರಣೆ ನಡೆಸುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಆಪರೇಷನ್ ಚಿರತೆ ವಿಫಲ: ಅರಣ್ಯಾಧಿಕಾರಿಗಳಿಂದ ತಪ್ಪಿಸಿಕೊಂಡು ಎಸ್ಕೇಪ್ ಆದ ಚೀತಾ
ಚಿರತೆ ಸೆರೆಗೆ 40 ಲಕ್ಷ ವೆಚ್ಚ?: ಕಳೆದ 22 ದಿನಗಳಿಂದ ಚಿರತೆ ಸೆರೆಗೆ ಅರಣ್ಯ ಇಲಾಖೆ ನಿತ್ಯ ಲಕ್ಷ ಲಕ್ಷ ವ್ಯಯಿಸುತ್ತಿದೆ. ಆದರೂ, ಚಾಲಾಕಿ ಚಿರತೆ ಸಿಗುತ್ತಿಲ್ಲ. ಅರಣ್ಯ ಇಲಾಖೆ ನಿತ್ಯ ಅಂದಾಜು 2.50 ಲಕ್ಷ ವ್ಯಯಿಸುತ್ತಿದೆ. ಈವರೆಗೆ ಅಂದಾಜು 40 ಲಕ್ಷ ವೆಚ್ಚ ಮಾಡಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು, ಆನೆಗಳಿಗೆ ಆಹಾರ, ಬೇಟೆ ನಾಯಿ,ಹಂದಿ ಹಿಡಿಯುವವರು, ಜೆಸಿಬಿ ಸೇರಿದಂತೆ ಇತರ ಸಂಪನ್ಮೂಲಗಳಿಗೆ ಲಕ್ಷಾಂತರ ಹಣವನ್ನು ಖರ್ಚು ಮಾಡಲಾಗುತ್ತಿದೆ. ಟ್ರ್ಯಾಪ್ ಕ್ಯಾಮರಾದಲ್ಲಿ ಸೆರೆಯಾಗುತ್ತಿರುವ ಚಿರತೆ ಬಲೆಗೆ ಬೀಳದೇ ಇರೋದು ಅರಣ್ಯ ಇಲಾಖೆ ಸಿಬ್ಬಂದಿ ಹೈರಾಣಾಗಿಸಿದೆ.
ಎನ್‌ಟಿಸಿಎ ನಿಯಮ ಉಲ್ಲಂಘನೆ ಆರೋಪ: ಬೆಳಗಾವಿ ನಗರದಲ್ಲಿ ಅವಿತ ಚಿರತೆ ಸೆರೆ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ)ದ ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ವನ್ಯಮೃಗ ಅವಿತ ಸ್ಥಳದ ಸುತ್ತ ಸದ್ದುಗದ್ದಲ ಆಗದಂತೆ ಎಚ್ಚರ ವಹಿಸಬೇಕಂತೆ. ಇಲ್ಲದಿದ್ದರೆ ಅದು ಬೆದರಿ ಜನರಿಗೆ ಅಪಾಯ ಮಾಡುವ ಸಾಧ್ಯತೆ ಹೆಚ್ಚು.
ಆದರೆ, ಗಾಲ್ಫ್ ಮೈದಾನದ ಸುತ್ತ ಜನಸಂಚಾರ, ವಾಹನ ದಟ್ಟಣೆ ಎಂದಿನಂತೆ ಇದೆ. ಈಚೆಗೆ 200ಕ್ಕೂ ಹೆಚ್ಚು ಸಿಬ್ಬಂದಿ ಗಾಲ್ಫ್ ಮೈದಾನದ ಸುತ್ತಲಿನ ಪೊದೆಯಲ್ಲಿ ಪಹರೆ ಮಾಡಿ ಬಂದಿದ್ದಾರೆ. ಚೀರಾಡುತ್ತ, ಸಿಳ್ಳೆ ಹೊಡೆಯುತ್ತ, ಏರ್‌ಗನ್ ಶಬ್ದ ಮಾಡುತ್ತ ಓಡಾಡಿದ್ದಾರೆ. ಇದು ಸಂಪೂರ್ಣ ಅವೈಜ್ಞಾನಿಕ ಎನ್ನುವುದು ವನ್ಯಜೀವಿ ತಜ್ಞರ ಅಭಿಪ್ರಾಯವಾಗಿದೆ.
ಇದಲ್ಲದೇ, ಚಿರತೆ ಸೆರೆಗೆ ಹಂದಿ ಹಿಡಿಯುವವರನ್ನು ಕರೆಸಿ ಹಂದಿಯ ಬಲೆಗಳನ್ನು ಬಳಸಿದ್ದು ನಿಯಮದ ಸ್ಪಷ್ಟ ಉಲ್ಲಂಘನೆ. ಮತ್ತೆ ಕೆಲವರು ಡ್ರೋನ್, ಕ್ವಾಡ್ ಕಾಪ್ಟರ್‌ಗಳನ್ನು ಬಳಸಲೂ ಮುಂದಾಗಿದ್ದರು. ಬೇಟೆ ನಾಯಿಗಳನ್ನೂ ತರಿಸಿ ಪ್ರಯತ್ನಿಸಿದರು. ಇವೆಲ್ಲವೂ ಎನ್‌ಟಿಸಿಎ ನಿಯಮಗಳ ಉಲ್ಲಂಘನೆಗೆ ಉದಾಹರಣೆಗಳಾಗಿವೆ.
ಇದನ್ನೂ ಓದಿ: ಬೆಳಗಾವಿ ಚಿರತೆ ಸೆರೆ ಕಾರ್ಯಾಚರಣೆ.. ಶಿವಮೊಗ್ಗದ ಸಕ್ರೆಬೈಲು ಬಿಡಾರದಿಂದ 2 ಆನೆಗಳ ಆಗಮನ
ಏನಿದು ಎನ್‌ಟಿಸಿಎ?: ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಿಯಮದಂತೆ ಜನವಸತಿ ಪ್ರದೇಶಕ್ಕೆ ಚಿರತೆ, ಹುಲಿಯಂತಹ ಪ್ರಾಣಿ ದಾಳಿ ಇಟ್ಟಾಗ ಮುಖ್ಯ ವನ್ಯಜೀವಿ ವಾರ್ಡನ್ (ಚೀಫ್ ವೈಲ್ಡ್‌ಲೈಫ್ ವಾರ್ಡನ್) ನೇತೃತ್ವದಲ್ಲಿ ಒಂದು ಸಮಿತಿ ರಚಿಸಬೇಕು. ಆ ಸಮಿತಿಯಲ್ಲಿ ಆಯಾ ಸ್ಥಳೀಯ ಸಂಸ್ಥೆಗಳ ಒಬ್ಬ ಪ್ರತಿನಿಧಿ, ಅಧಿಕಾರಿ, ಅರಣ್ಯಾಧಿಕಾರಿಗಳೂ ಇರಬೇಕು. ಪ್ರಾಣಿ ಅವಿತ ಪ್ರದೇಶದ ಸುತ್ತ ನಿಷೇಧಾಜ್ಞೆ ಜಾರಿ ಮಾಡಬೇಕು. ಕಾರ್ಯಾಚರಣೆಗೆ ಪರಿಣತರನ್ನು ಬಿಟ್ಟರೆ ಬೇರೆ ಯಾರನ್ನೂ ಬಳಸಬಾರದು ಎಂಬ ನಿಯಮವಿದೆ.
ಎನ್‌ಟಿಸಿಎ ನಿಯಮಾವಳಿ ಉಲ್ಲಂಘನೆ ಆಗಿಲ್ಲ: ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ್, ಎನ್‌ಟಿಸಿಎ ನಿಯಮಾವಳಿಗಳು ಹುಲಿಗೆ ಅನ್ವಯವಾಗುತ್ತವೆ. ಚಿರತೆಗೆ ಅಲ್ಲ. ಮೇಲಾಗಿ, ಈಗ ಚಿರತೆ ಅವಿತ ಜಾಗ ರಕ್ಷಣಾ ಇಲಾಖೆಗೆ ಒಳಪಟ್ಟಿದೆ. ಇದು ಜನವಸತಿ ಪ್ರದೇಶವಲ್ಲ. ಮುಂಚಿನಿಂದಲೇ ಇದು ಜನಸಂಚಾರ ನಿಷೇಧಿತ ಪ್ರದೇಶವಾಗಿದೆ. ಹಾಗಾಗಿ, ಚಿರತೆ ಕಾರ್ಯಾಚರಣೆಯಲ್ಲಿ ವನ್ಯ ಮೃಗ ಸಂರಕ್ಷಣೆಗೆ ಸಂಬಂಧಿಸಿದ ಯಾವುದೇ ನಿಯಮ ಉಲ್ಲಂಘನೆ ಮಾಡಿಲ್ಲ ಎಂದು ಮಾಹಿತಿ ನೀಡಿದ್ದಾರೆ.