ಬೆಳಗಾವಿ : ನಗರದ ಹಿಂಡಲಗಾ ಗ್ರಾಮದಲ್ಲಿ ಮಹಾದೇವ ಗಲ್ಲಿಯಲ್ಲಿ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಇಂದು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಹಿಂಡಲಗಾ ಗ್ರಾಮದಲ್ಲಿ ಸುಮಾರು 9 ಕೋಟಿ ರೂ.ಗಳ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ಕೆಲವೇ ದಿನಗಳಲ್ಲಿ ಹಿಂಡಲಗಾ ಗ್ರಾಮದೇವತೆ ಶ್ರೀ ಮಹಾಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವ ನಡೆಯಲಿದೆ. ಈ ಹಿನ್ನೆಲೆ 20 ವರ್ಷಗಳಿಂದ ಅಭಿವೃದ್ಧಿ ಕಾಣದ ಹಿಂಡಲಗಾ ಗ್ರಾಮವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ಅಭಿವೃದ್ಧಿ ವಿಚಾರದಲ್ಲಿ ಪಕ್ಷಭೇದ ಮರೆತು ಅಭಿವೃದ್ಧಿಗೆ ಒತ್ತು ನೀಡಬೇಕು. ಚುನಾವಣೆ ವೇಳೆ ಮಾತ್ರ ರಾಜಕೀಯ ಮಾಡೋಣ ಎಂದ ಅವರು, ನಾನು ಎಂಇಎಸ್-ಬಿಜೆಪಿ ಎಲ್ಲರಿಗೂ ಶಾಸಕಿ. ನಾನು ರಾಜಕಾರಣಕ್ಕೆ ನಿಂತರೇ ಮುಂದೆ ಯಾರೂ ನಿಲ್ಲಲಾರರು. ನಾನು ಶಾಸಕಿ ಇಲ್ಲದಿರುವಾಗ ಕೂಡ ಕ್ಷೇತ್ರದ ವ್ಯಾಪ್ತಿಯಲ್ಲಿ ಕೆಲಸ ಮಾಡಿದ್ದೇನೆ ಎಂದರು.
ಅಭಿವೃದ್ಧಿ ಮಾಡುವ ಇಚ್ಛೆಯಿದ್ದರೇ ಅಧಿಕಾರ ಬೇಕೆಂಬುದಿಲ್ಲ. ಈಗ ನಿಮ್ಮದೇ ಬಿಜೆಪಿ ಸರ್ಕಾರವಿದೆ. ಅಭಿವೃದ್ಧಿ ಮಾಡಬೇಕೆಂಬ ಛಲವಿದ್ದರೇ ಮಾಡಿ ತೋರಿಸಿ. ನಾವೂ ನಿಮ್ಮನ್ನ ಸ್ವಾಗತಿಸುತ್ತೇವೆ-ವಿರೋಧಿಸುವುದಿಲ್ಲ. ಪಕ್ಷಭೇದ ಮರೆತು ಕೆಲಸ ಮಾಡೋಣ. ಹಿಂಡಲಗಾ ಮಹಾಲಕ್ಷ್ಮಿ ಜಾತ್ರೆ ಅದ್ಧೂರಿಯಾಗಿ ಆಚರಿಸೋಣ. ಶ್ರೀದೇವಿ ಕೃಪೆಗೆ ಪಾತ್ರರಾಗೋಣ ಎಂದು ಮಾಜಿ ಶಾಸಕ ಸಂಜಯ ಪಾಟೀಲಗೆ ಟಾಂಗ್ ನೀಡಿದರು.