ಗೋಕಾಕ್: ಮತದಾರರಿಂದ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಗೆಲ್ಲುವ ವಿಶ್ವಾಸವಿದೆ. ಕ್ಷೇತ್ರದಲ್ಲಿ ನಾವು ದುಡ್ಡು ಹಂಚಿಕೆ ಮಾಡಿಲ್ಲ. ನಾನು ಮತ್ತು ಕಾಂಗ್ರೆಸ್ ಕಾರ್ಯಕರ್ತರೆಲ್ಲ ಸೇರಿ ರಮೇಶ್ ಅವರನ್ನು ಗೆಲ್ಲಿಸುತ್ತಿದ್ದೆವು. ಆದರೆ ಅನ್ಯಾಯ, ಭ್ರಷ್ಟಾಚಾರ ಹೆಚ್ಚಾಗಿದ್ದಕ್ಕೆ ಅವರನ್ನು ಪಕ್ಷದಿಂದ ಕೈಬಿಟ್ಟೆವು ಎಂದು ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಹೇಳಿದ್ದಾರೆ.
ನಗರದ ಕೆಬಿಎಸ್ ನಂ-3 ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದ ನಂತರ ಮಾಧ್ಯಮರೊಂದಿಗೆ ಮಾತನಾಡಿದ ಅವರು, ಅನ್ಯಾಯ ಮಾಡುವವರ ಜೊತೆ ಹೋಗದಂತೆ ನಮ್ಮ ತಂದೆ ತಾಯಿ ಹೇಳಿದ್ದರು. ಹೀಗಾಗಿ ರಮೇಶ್‌ರನ್ನು ಬಿಟ್ಟು ಹೊರಗೆ ಬಂದೆವು ಎಂದಿದ್ದಾರೆ.
ಅಣ್ಣ ತಮ್ಮಂದಿರಿಗೆ ನಡುವೆ ಜಗಳ ಹಚ್ಚಿಸುತ್ತಿದ್ದಾರೆ ಎಂಬ ರಮೇಶ್ ಜಾರಕಿಹೊಳಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಜಗಳ ಹಚ್ಚಿಸುತ್ತಿರುವುದು ಅವರೇ ಹೊರತೂ ನಾನಲ್ಲ ಎಂದರು. ನನ್ನ ಬಳಿ ಹರಾಮಿ ಹಣ ಇಲ್ಲ. ಅವರ ಅಳಿಯಂದಿರ ಬಳಿ ಹರಾಮಿ ದುಡ್ಡಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯರಂತ ದೊಡ್ಡ ನಾಯಕನ ಬಗ್ಗೆ ಈ ಮನುಷ್ಯ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾನೆ. ಸಿದ್ದರಾಮಯ್ಯ ಎಲ್ಲಿ, ಈತ ಎಲ್ಲಿ ಎಂದು ಕಿಡಿಕಾರಿದ್ದಾರೆ. ರಮೇಶ್ ಅವರನ್ನು ಜನರು ಡಿಸೆಂಬರ್ 9ರ ನಂತರ ಎಲ್ಲಿಗೆ ಕಳಿಸಬೇಕೋ ಅಲ್ಲಿಗೇ ಕಳಿಸುತ್ತಾರೆ ಭವಿಷ್ಯ ನುಡಿದರು.