ಬೆಳಗಾವಿ: ಕೊರೊನಾ ವೈರಸ್ ಜಿಲ್ಲೆಗೆ ಕಾಲಿಡದಂತೆ ತಡೆಗಟ್ಟಲು ನಿನ್ನೆ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಸುದ್ದಿಗೋಷ್ಠಿ ನಡೆಸಿ ಯಾರೂ ಹೊರಗೆ ಬರದಂತೆ ಹಾಗೂ ಮಾರುಕಟ್ಟೆಗಳನ್ನು ಬಂದ್ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಆದ್ರೀಗ ಜನರು ಇದಕ್ಕೆ ತಲೆಕೆಡಿಸಿಕೊಂಡಂತಿಲ್ಲ. ವ್ಯಾಪಾರ ಹಾಗೂ ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದಾರೆ ಅನಿಸುತ್ತದೆ.
ಹೌದು, ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಎಂದಿನಂತೆ ಸಾಮಾನ್ಯವಾಗಿ ತರಕಾರಿ ಮಾರುಕಟ್ಟೆ ಆರಂಭವಾಗಿದ್ದು, ಅಂದಾಜು ಒಂದು ತಿಂಗಳಿಗೆ ಬೇಕಾಗುವ ತರಕಾರಿ, ಈರುಳ್ಳಿ, ಆಲೂಗಡ್ಡೆ ಸೇರಿದಂತೆ ಇತರ ತರಕಾರಿ ಪದಾರ್ಥಗಳನ್ನು ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಕಂಡು ಬಂತು.
ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಪುರಸಭೆ ಸಿಬ್ಬಂದಿ ಮತ್ತು ಅಧಿಕಾರಿಗಳು ಅಂಗಡಿಗಳನ್ನು ಬಂದ್ ಮಾಡಿಸಿ, ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತೆ ವಹಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ರಾಜ್ಯಾದ್ಯಂತ ಅಗತ್ಯ ಸೇವೆಗಳು ಮತ್ತು ಅಗತ್ಯ ವಸ್ತುಗಳ ಹೊರತಾಗಿ ಬೇರೆ ಉದ್ದಿಮೆಗಳು ತೆರೆಯದಂತೆ ಹಾಗೂ ಜನರು ಗುಂಪು ಸೇರದಂತೆ ಸೆಕ್ಷನ್ 144 ಜಾರಿ ಇದ್ದು, ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು.
ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ:
ಚಿಕ್ಕೋಡಿ ಜನ ಮುಂಜಾಗ್ರತರಾಗಿ ರಸ್ತೆಗೆ ಇಳಿಯಬೇಡಿ. ಒಂದು ವೇಳೆ ರಸ್ತೆಗೆ ಇಳಿದರೆ ಲಾಠಿ ರುಚಿ ತೋರಿಸಲಾಗುವುದು. ಅಲ್ಲದೇ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಚಿಕ್ಕೋಡಿ ಸಿಪಿಐ ಆರ್.ಆರ್.ಪಾಟೀಲ ಸಾರ್ವಜನಿಕರಿಗೆ ಮನವಿ ಮಾಡಿಕೊಂಡರು.
ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಕರ್ನಾಟಕವನ್ನು ಲಾಕ್ಡೌನ್ ಮಾಡಲಾಗಿದೆ. ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಜನರ ಅನುಕೂಲಕ್ಕಾಗಿ ಸರ್ಕಾರ ಜನತಾ ಕರ್ಫೂ ಆದೇಶ ಹೊರಡಿಸಿದೆ. ಈ ನಿಯಮಗಳನ್ನ ಉಲ್ಲಂಘನೆ ಮಾಡಿದ್ದೇ ಆದಲ್ಲಿ ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ಜನರಿಗೆ ಜಾಗೃತಿ ಮೂಡಿಸಿದರು.