ಚಿಕ್ಕೋಡಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಮಳೆ ಕಡಿಮೆಯಾಗಿದ್ದು, ನದಿ ತೀರದ ಜನರು ಸ್ವಲ್ಪ ನಿರಾಳರಾಗಿದ್ದಾರೆ. ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ಒಳಹರಿವು 1,60,000 ಕ್ಕೂ ಅಧಿಕ ಇದೆ ಎಂದು ಚಿಕ್ಕೋಡಿ ತಹಶೀಲ್ದಾರ್ ಶುಭಾಸ ಸಂಪಗಾಂವಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಮಹಾರಾಷ್ಟ್ರದ ರಾಜಾಪೂರ ಬ್ಯಾರೆಜ್‌ನಿಂದ 1,28,875 ಕ್ಯೂಸೆಕ್ ನೀರು ಹಾಗೂ ದೂಧಗಂಗಾ ನದಿಯಿಂದ 33,616 ಕ್ಯೂಸೆಕ್ ನೀರು ಹೀಗೆ ಒಟ್ಟು 1,60,000 ಕ್ಯೂಸೆಕ್ ಅಧಿಕ ನೀರು ರಾಜ್ಯದ ಕೃಷ್ಣಾಗೆ ಹರಿದು ಬರುತ್ತಿದೆ. ಮಹಾರಾಷ್ಟ್ರದ ಕೊಯ್ನಾ-44 ಮಿ.ಮೀ, ನವಜಾ-25 ಮಿ.ಮೀ, ಮಹಾಬಲೇಶ್ವರ-48 ಮಿ.ಮೀ, ವಾರಣಾ-25 ಮಿ.ಮೀ, ಕಾಳಮ್ಮವಾಡಿ-28 ಮಿ.ಮೀ, ರಾಧಾನಗರಿ-47 ಮಿ.ಮೀ, ಪಾಟಗಾಂವ-62 ಮಿ.ಮೀ ಮಳೆಯಾಗಿದ್ದು ವರದಿಯಾಗಿದೆ. ಕಳೆದ ಎರಡು ದಿನಗಳಿಗೆ ಹೋಲಿಸಿದರೆ ಮಹಾರಾಷ್ಟ್ರದ ಭಾಗದಲ್ಲಿ ಸಂಪೂರ್ಣವಾಗಿ ಮಳೆ ಕಡಿಮೆಯಾಗಿದೆ.
ಚಿಕ್ಕೋಡಿ ಉಪವಿಭಾಗದಲ್ಲಿ ಚಿಕ್ಕೋಡಿ-3.0 ಮಿ.ಮೀ, ಅಂಕಲಿ-1.2 ಮಿ.ಮೀ, ಹಾಗೂ ಸದಲಗಾ-1.6 ಮಿ.ಮೀ ಮಿ.ಮೀ ಮಳೆಯಾಗಿರುವ ವರದಿಯಾಗಿದೆ. ಆದರೆ, ನಿನ್ನೆಯ ವರದಿಗೆ ಹೋಲಿಸಿದರೆ ಚಿಕ್ಕೋಡಿ ಉಪವಿಭಾಗದಲ್ಲಿ ಅರ್ಧಕ್ಕಿಂತ ಕಡಿಮೆ ಮಳೆ ವರದಿಯಾಗಿದೆ. ಮಹಾರಾಷ್ಟ್ರ ಹಾಗೂ ಕರ್ನಾಟಕ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾದರೂ ಕೃಷ್ಣಾ ನದಿ ನೀರಿನ ಹರಿವಿನಲ್ಲಿ ಹೆಚ್ಚಳವಾಗಿದೆ.
ಈಗಾಗಲೇ ಚಿಕ್ಕೋಡಿ ಉಪವಿಭಾಗದ 8 ಸೇತುವೆಗಳು ಜಲಾವೃತಗೊಂಡಿವೆ. ಚಿಕ್ಕೋಡಿ, ನಿಪ್ಪಾಣಿ ತಾಲೂಕಿನ ಕಾರದಗಾ-ಬೋಜ, ಬೋಜವಾಡ-ಕುನ್ನೂರ, ಅಕ್ಕೋಳ-ಸಿದ್ನಾಳ, ಜತ್ರಾಟ-ಭೀವಸಿ, ಸದಲಗಾ-ಬೋರಗಾಂವ, ಮಲ್ಲಿಕವಾಡ-ದತ್ತವಾಡ, ಯಡೂರ-ಕಲ್ಲೋಳ ಹಾಗೂ ಕಾಗವಾಡ ತಾಲೂಕಿನ ಉಗಾರ-ಕುಡಚಿ ಸೇತುವೆಗಳು ಜಲಾವೃತವಾಗಿವೆ. ಹಾಗಾಗಿ 16ಕ್ಕೂ ಹೆಚ್ಚು ಗ್ರಾಮಗಳ ಜನರು ಪರ್ಯಾಯ ಮಾರ್ಗವಾಗಿ ಸಂಚರಿಸುತ್ತಿದ್ದಾರೆ.