ಬೆಳಗಾವಿ: ರಮೇಶ ಜಾರಕಿಹೊಳಿ ಹಾಪ್ ಪ್ಯಾಂಟ್, ಕರಿ ಟೋಪಿ ಹಾಕಿದ್ದು ನೋಡಿಲ್ಲ. ಮುಸ್ಲಿಂ ಟೋಪಿ ಹಾಕಿದ್ದು ನೋಡಿದ್ದೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿಕೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ, ತಾವು ಮೂಲತಃ ಜನಸಂಘದವರು ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸತೀಶ್, ರಮೇಶ್ ಜಾರಕಿಹೊಳಿ ಯಾವಾಗ ಸಂಘ ಪರಿವಾರದಲ್ಲಿ ಇದ್ರು ನಾವು ನೋಡಿಲ್ಲ. ಗೋಕಾಕನಲ್ಲಿ ಪತ್ರಾವಳಿ ಅಂತಾ ದೊಡ್ಡ ಕುಟುಂಬ ಇದೆ. ಅವ್ರು ಕಟ್ಟಾ ಆರ್ಎಸ್ಎಸ್ ಫಾಲೋ ಮಾಡುತ್ತಿದ್ರು. ಅವರ ಮನೆಗೆ ನಮ್ಮ ತಂದೆ ಹೋಗಿ ಕೂರುತಿದ್ರು. ಆದ್ರೆ, ನಮ್ಮ ತಂದೆ ಯಾವತ್ತೂ ಆರ್ಎಸ್ಎಸ್ ಕಚೇರಿಗೆ ಹೋಗಿಲ್ಲ, ಫಾಲೋ ಮಾಡಿಲ್ಲ. ಆರ್ಎಸ್ಎಸ್ ಗೂ ನಮ್ಗೂ ಯಾವುದೇ ಸಂಬಂಧವಿಲ್ಲ. ಆದ್ರೆ, ರಮೇಶ್ ಜಾರಕಿಹೊಳಿ ಹಾಪ್ ಚೆಡ್ಡಿ, ಕರಿ ಟೋಪಿ ಹಾಕಿದ್ದೆ ಅಂತ ಹೇಳಿದ್ದಾರೆ. ಆದ್ರೆ, ನಾವ್ಯಾರೂ ರಮೇಶ್ ಜಾರಕಿಹೊಳಿ ಹಾಪ್ ಚೆಡ್ಡಿ, ಕರಿ ಟೋಪಿ ಹಾಕಿದ್ದು ನೋಡಿಲ್ಲ. ಮುಸ್ಲಿಂ ಟೋಪಿ ಹಾಕಿದ್ದು ನೋಡಿದ್ದೇವಿ ಎಂದರು.
ಆ ಬಗ್ಗೆ ಸಾಕಷ್ಟು ಸಾಕ್ಷ್ಯಗಳಿವೆ. ಆದ್ರೆ ಆರ್ಎಸ್ಎಸ್ ಗೂ ನಮ್ಮ ಕುಟುಂಬಕ್ಕೂ ಯಾವುದೇ ಸಂಬಂಧವಿಲ್ಲ. ನಮ್ಮ ತಂದೆಗೆ ಪತ್ರಾವಳಿ ಎಂಬುವವರೊಂದಿಗೆ ವೈಯಕ್ತಿಕ ಬಾಂಧವ್ಯ ಇತ್ತು. ಹಾಗಾಗಿ ಅಲ್ಲಿ ಹೋಗಿ ಕೂಡುತ್ತಿದ್ರು ಅಷ್ಟೇ. ಅದನ್ನೇ ರಮೇಶ್ ಆರ್ಎಸ್ಎಸ್ ಎಂದು ಬಿಂಬಿಸುತ್ತಿದ್ದಾರೆ. ಆದ್ರೆ ರಮೇಶ್ 30 ವರ್ಷದಲ್ಲಿ ಯಾವಾಗಲೂ ಈ ರೀತಿ ಹೇಳಿಕೆ ನೀಡಿಲ್ಲ. ಇದೀಗ ಏಕಾಏಕಿ ಹೇಳಿಕೆ ನೀಡಿರುವುದು ಅಚ್ಚರಿ ತಂದಿದೆ ಎಂದರು.
ಓದಿ : ಅಮಿತ್ ಶಾ ರಾಜ್ಯ ಭೇಟಿ ನಂತರ ನೂತನ ಸಚಿವರಿಗೆ ಖಾತೆ ಹಂಚಿಕೆ
ರಮೇಶ್ ಜಾರಕಿಹೊಳಿ ಮುಸ್ಲಿಂ ಪರವಾಗಿ ಹೋರಾಟ ಮಾಡಿದವನು. ಈಗ ಖಾಕಿ ಚೆಡ್ಡಿ, ಕರಿ ಚೆಡ್ಡಿ ಹಾಕಿರುವ ಹೇಳಿಕೆ ಅಚ್ಚರಿಗೆ ಕಾರಣವಾಗಿದೆ. ಮುಂದೂ ಕೂಡ ಮುಸ್ಲಿಂ ಪರವಾಗಿ ಇರ್ತಾನೆ ಅನ್ನೋ ನಂಬಿಕೆ ಇದೆ. ಅಧಿಕಾರದ ಆಸೆಗೆ ಸಿದ್ಧಾಂತಗಳನ್ನು ಬದಲಿಸಬಾರದು, ಎಲ್ಲಿಯೇ ಇದ್ರೂ ಮೂಲ ಸಿದ್ಧಾಂತ ಬಿಡಬಾರದು ಎಂದರು.