ಬೆಳಗಾವಿ : ದೇವರ ಹುಂಡಿಗಳಿಗೆ ಹಾಕುವ ಹಣವನ್ನು ಮಕ್ಕಳ ಶಿಕ್ಷಣಕ್ಕೆ ಹಾಕಬೇಕು. ಮನುವಾದದಂತಹ ಪದ್ಧತಿಗಳಿಂದ ಇಂದಿನ ಸಮಾಜ ದೂರವಿರಬೇಕು. ಇಲ್ಲದಿದ್ರೆ ಅದು ನಮ್ಮನ್ನು ಪಾತಾಳಕ್ಕೆ ತಳ್ಳಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಗೋಕಾಕ್ ನಗರದ ಅಂಬೇಡ್ಕರ್ ಭವನದಲ್ಲಿ ಮಾದಿಗ ಸಮಾಜದ ಸೇವಾ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಗೋಕಾಕ್, ಮೂಡಲಗಿ ತಾಲೂಕಿನ ಮಾದಿಗ ಸಮಾಜದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಕ್ಷಣದಿಂದ ವಂಚಿತವಾದ ಹಿನ್ನೆಲೆ ಮಾದಿಗ ಸಮಾಜ ಈಗಲೂ ಸಾಮಾಜಿಕ, ಆರ್ಥಿಕ ಸೇರಿ ಎಲ್ಲಾ ರಂಗದಲ್ಲೂ ಹಿಂದುಳಿದಿದೆ. ನಾವು ಎಲ್ಲಿಯವರೆಗೂ ಇತಿಹಾಸ ತಿಳಿಯುವುದಿಲ್ಲವೋ, ಅಲ್ಲಿಯವರೆಗೂ ಸುಧಾರಣೆ ಆಗಲು ಸಾಧ್ಯವಿಲ್ಲ. ಹೀಗಾಗಿ, ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದರು.
ನಮ್ಮ ಮಕ್ಕಳೇ ನಮಗೆ ದೇವರು. ಅವರಿಗಾಗಿ ಪೋಷಕರು ಶ್ರಮಪಡಬೇಕು. ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚು ಹಣ ಖರ್ಚು ಮಾಡದೆ ಮಕ್ಕಳ ಉದ್ಧಾರಕ್ಕಾಗಿ ವ್ಯಯಿಸಬೇಕು. ದೇವರ ಹುಂಡಿಗಳಿಗೆ ಹಾಕುವ ಹಣವನ್ನು ಮಕ್ಕಳ ಶಿಕ್ಷಣಕ್ಕಾಗಿ ಬಳಸಿಕೊಳ್ಳಬೇಕು ಎಂದರು. ಮಾದಿಗ ಸಮಾಜ ಸೇರಿ ಎಲ್ಲಾ ವರ್ಗದ ಜನರು ಮೂಢನಂಬಿಕೆಯಿಂದ ಹೊರ ಬರಬೇಕು. ಅಂದಾಗ ಮಾತ್ರ ಸಮಾಜ ಸುಧಾರಣೆ ಆಗಲಿದೆ ಎಂದರು.