ಚಿಕ್ಕೋಡಿ(ಬೆಳಗಾವಿ): ಜಿಲ್ಲೆಯ ವಿವಿಧ ಮತಕ್ಷೇತ್ರಗಳಲ್ಲಿ ಇಂದು(ಸೋಮವಾರ) ಬೆಳಗ್ಗೆಯಿಂದ ಸಂಜೆವರೆಗೆ ಚಿತ್ರನಟ ಕಿಚ್ಚ ಸುದೀಪ್ ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ರೋಡ್ ನಡೆಸಿ ಮತಯಾಚಿಸಿದರು. ನಟ ಕಿಚ್ಚ ಸುದೀಪ್ ಅವರು ಯಮಕನಮರಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹುಂದ್ರಿ ಪರ ವಂಟಮೂರಿಯಲ್ಲಿ ನಡೆದ ರೋಡ್ ಶೋ ನಲ್ಲಿ ಭಾಗವಹಿಸಿದರು. ಈ ವೇಳೆ ಸಾವಿರಾರು ಬಿಜೆಪಿ ಕಾರ್ಯಕರ್ತರು ಹೂಮಳೆ ಸುರಿಸಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು.
ನಟ ಸುದೀಪ್ ಮಾತನಾಡಿ, ಬರಿ ಜನ ಸೇರೋದು ಅಲ್ಲಾ ಬಸವರಾಜ ಹುಂದ್ರಿ ಅವರಿಗೆ ಆಶೀರ್ವಾದ ಮಾಡಬೇಕು. ನಾನು ಎಲ್ಲಿ ಹುಟ್ಟಿದೆ. ಯಾವ ಜನಾಂಗ ಅನ್ನೋದು ಮುಖ್ಯ ಅಲ್ಲ. ಒಬ್ಬ ಮನುಷ್ಯನಾಗಿರುವುದು, ಸ್ನೇಹಿತನಾಗಿರುವುದು ಮುಖ್ಯ. ಆಗ ಮಾತ್ರ ಮನಸ್ಸುಗಳನ್ನು ಗೆಲ್ಲಲು ಸಾಧ್ಯ. ಇಲ್ಲಿ ನಾನು ನಿಮ್ಮ ಸಹೋದರ, ಸ್ನೇಹಿತನಾಗಿ ಬಸವರಾಜ ಹುಂದ್ರಿ ಪರ ಪ್ರಚಾರಕ್ಕೆ ಬಂದಿದ್ದೇನೆ. ನನ್ನ ಬಾಂಧವರ ಪರ ತುಂಬಾ ಪ್ರೀತಿ ಇದೆ ಎಂದರು.
ಇನ್ನು ಯಮಕನಮರಡಿ ಅಭ್ಯರ್ಥಿ ಬಸವರಾಜ ಹುಂದ್ರಿ ಬಡ ಕುಟುಂಬದಿಂದ ಬಂದಿದ್ದಾರೆ. ಸಾಮಾನ್ಯ ಕಾರ್ಯದರ್ಶಿಗೆ ನರೇಂದ್ರ ಮೋದಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಸೇರಿ ಅವರಿಗೆ ಟಿಕೆಟ್ ಕೊಟ್ಟಿದ್ದಾರೆ. ನಿಮ್ಮ ಸಹಕಾರ ಹಾಗೂ ಸೇವೆ ಮಾಡಲು ಬಸವರಾಜ ಹುಂದ್ರಿ ಅವರಿಗೆ ಅವಕಾಶ ಕೊಡಿ. ಮತ ಹಾಕಿ ಗೆಲ್ಲಿಸುವುದು ಅಷ್ಟೇ ಅಲ್ಲ, ಅವರ ಕಡೆಯಿಂದ ಕೆಲಸ ಮಾಡಿಸಿಕೊಳ್ಳುವುದು ಮುಖ್ಯ. ಈ ಊರಲ್ಲಿ ಸರಿಯಾಗಿ ರಸ್ತೆ ಇಲ್ಲ. ಯಮಕನಮರಡಿ ಕ್ಷೇತ್ರದಲ್ಲಿ ತುಂಬಾನೇ ಕೆಲಸ ಬಾಕಿ ಇದೆ. ಗೆದ್ದರೆ ಇಲ್ಲಿ ಕೆಲಸಗಳನ್ನು ಮಾಡಿಕೊಡಿತೀರಾ ಸರ್ ಎಂದು ಅಭ್ಯರ್ಥಿ ಬಸವರಾಜ ಹುಂದ್ರಿಗೆ ಸುದೀಪ್ ಕೇಳಿದ್ರು. ಈ ವೇಳೆ ಬಸವರಾಜ ಹುಂದ್ರಿ ಗೆದ್ದರೆ ಎಲ್ಲ ಕೆಲಸವನ್ನು ಮಾಡ್ತೀನಿ, ಈ ಬಾರಿ ಅವಕಾಶ ಕೊಡಿ ಎಂದು ಮನವಿ ಮಾಡಿದ್ರು.
ಇದೆ ವೇಳೆ ಅಭಿಮಾನಿಗಳು ವೀರ ಮದಕರಿ ಚಿತ್ರದ ಡೈಲಾಗ್ ಹೇಳುವಂತೆ ಒತ್ತಾಯಿಸಿದರು. ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಸುದೀಪ್ ವೀರ ಮದಕರಿ ಚಿತ್ರದ ಡೈಲಾಗ್ ಹೇಳಿ ತಮ್ಮ ಅಭಿಮಾನಿಗಳನ್ನು ರಂಜಿಸಿದರು.
ಮಹಾಂತೇಶ ದೊಡ್ಡಗೌಡರ ಪರವೂ ಸುದೀಪ್ ಮತಬೇಟೆ: ಇಂದು ಬೆಳಗ್ಗೆ ಕಿತ್ತೂರು ಕ್ಷೇತ್ರದ ನೇಸರಗಿಯಲ್ಲಿ ರೋಡ್ ಶೋ ನಡೆಸಿದ ನಟ ಸುದೀಪ್ ಅವರು ಬಿಜೆಪಿ ಅಭ್ಯರ್ಥಿ ಮಹಾಂತೇಶ ದೊಡ್ಡಗೌಡರ ಪರ ಮತಯಾಚಿಸಿದರು. ಈ ವೇಳೆ ಸುದೀಪ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು. ಇದಾದ ಬಳಿಕ ಸಂಜೆ ಬೆಳಗಾವಿ ಉತ್ತರ ಕ್ಷೇತ್ರದ ಶ್ರೀನಗರ ಗಾರ್ಡನ್ ನಿಂದ ರೋಡ್ ಶೋ ನಡೆಸಿದ ಸುದೀಪ್, ಬಿಜೆಪಿ ಅಭ್ಯರ್ಥಿ ಡಾ. ರವಿ ಪಾಟೀಲ ಪರವಾಗಿ ಮತಯಾಚಿಸಿದರು. ಈ ರೋಡ್ ಶೋ ನಲ್ಲಿ ಅಭ್ಯರ್ಥಿ ಡಾ. ರವಿ ಪಾಟೀಲ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಂಸದೆ ಮಂಗಳಾ ಅಂಗಡಿ, ಶಾಸಕ ಅನಿಲ್ ಬೆನಕೆ ಮುರುಗೇಂದ್ರಗೌಡ ಪಾಟೀಲ ಭಾಗವಹಿಸಿದ್ದರು.
ನಂತರ ಸಂಜೆ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಅಭ್ಯರ್ಥಿ ಅಭಯ ಪಾಟೀಲ ಪರವಾಗಿ ರೋಡ್ ಶೋ ನಡೆಸಿದ ಸುದೀಪ್, ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದ್ರು. ಇನ್ನು, ಕಿಚ್ಚ ಸುದೀಪ್ರನ್ನು ನೋಡಲು ಸಾಗರೋಪಾದಿಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು.
ಇದನ್ನೂ ಓದಿ: ಎಲೆಕ್ಷನ್, ಸೆಲೆಕ್ಷನ್, ಕರೆಕ್ಷನ್ ನಮ್ಮ ಸೂತ್ರ.. 110 ಕ್ಷೇತ್ರದಲ್ಲಿ ಪ್ರಜಾಕೀಯ ಸ್ಪರ್ಧೆ - ಉಪೇಂದ್ರ ಮಾಹಿತಿ