ಬೆಳಗಾವಿ: ಪ್ರವಾಹದ ಸಂದರ್ಭದಲ್ಲಿ ಉಂಟಾದ ಮನೆಹಾನಿಗೆ ಪರಿಹಾರ, ಬೆಳೆವಿಮೆ ಪರಿಹಾರ ಹಾಗೂ ರಸ್ತೆ, ಸೇತುವೆ ಸೇರಿದಂತೆ ಇತರ ಮೂಲಸೌಕರ್ಯಗಳನ್ನು ಒದಗಿಸುವ ಕೆಲಸಗಳನ್ನು ಕೂಡಲೇ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಸೂಚನೆ ನೀಡಿದರು.

ಸುವರ್ಣಸೌಧದಲ್ಲಿ ಶುಕ್ರವಾರ ನಡೆದ 2019-20 ನೇ ಸಾಲಿನ ಮೂರನೇ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನಸಂಚಾರಕ್ಕೆ ಅಗತ್ಯವಿರುವ ಮುಖ್ಯ ರಸ್ತೆಗಳು ಹಾಗೂ ಗ್ರಾಮೀಣ ರಸ್ತೆಗಳನ್ನು ದುರಸ್ತಿಗೊಳಿಸುವ ಕೆಲಸ ಹತ್ತು ದಿನಗಳಲ್ಲಿ ಪೂರ್ಣಗೊಳಿಸಬೇಕು. ಈಗಾಗಲೇ ವಿಳಂಬವಾಗಿದ್ದು, ಇನ್ನಷ್ಟು ವಿಳಂಬವಾದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಸಚಿವ ಜಗದೀಶ್ ಶೆಟ್ಟರ್ ಎಚ್ಚರಿಕೆ ನೀಡಿದರು.
ಪ್ರವಾಹದಿಂದ ಹಾನಿಗೊಳಗಾಗಿರುವ ರಸ್ತೆ, ಸೇತುವೆ ಮತ್ತಿತರ ಮೂಲಸೌಕರ್ಯಗಳನ್ನು ಪುನರ್ ನಿರ್ಮಿಸಲು ಸರ್ಕಾರ ಈಗಾಗಲೇ ಲೋಕೋಪಯೋಗಿ, ಸಣ್ಣ ನೀರಾವರಿ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಗಳಿಗೆ ಹಣ ಬಿಡುಗಡೆ ಮಾಡಿದ್ದು, ಯಾವುದೇ ಕಾರಣಕ್ಕೂ ವಿಳಂಬ ಮಾಡದೇ ಎಲ್ಲ ಕೆಲಸಗಳನ್ನು ತಕ್ಷಣವೇ ಪೂರ್ಣಗೊಳಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಪ್ರವಾಹ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ವ್ಯವಸ್ಥೆ ತೀವ್ರ ಹದಗೆಟ್ಟಿದೆ. ಆದರೆ, ಅಥಣಿ, ಸವದತ್ತಿ ಸೇರಿದಂತೆ ಕೆಲವು ತಾಲೂಕುಗಳಲ್ಲಿ ಇದುವರೆಗೆ ವಿದ್ಯುತ್ ಸಂಪರ್ಕ ಹಾಗೂ ರೈತರ ಪಂಪಸೆಟ್ಗಳಿಗೆ ಸಂಪರ್ಕ ನೀಡದಿರುವುದು ಕಂಡುಬಂದಿದೆ. ಆದ್ದರಿಂದ ಇನ್ನು ಹದಿನೈದು ದಿನಗಳಲ್ಲಿ ಕೆಲಸ ಪೂರ್ಣಗೊಳಿಸಬೇಕು ಎಂದು ಸಚಿವರು ತಿಳಿಸಿದರು.
ಪ್ರವಾಹದಿಂದ ಉಂಟಾದ ಹಾನಿ ಸರಿಪಡಿಸುವುದು ಆದ್ಯತೆ ನೀಡಬೇಕು. ರಾಜ್ಯಮಟ್ಟದಲ್ಲಿ ತೆಗೆದುಕೊಳ್ಳಬೇಕಾದ ವಿಷಯಗಳನ್ನು ಸಂಪುಟ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು.
ಅಧಿಕಾರಿಗಳು ಜನಪ್ರತಿನಿಧಿಗಳ ಸೂಚನೆಗೆ ಕಾಯದೇ ಸ್ವಯಂಪ್ರೇರಣೆಯಿಂದ ಜನಪರ ಕೆಲಸ ಮಾಡಬೇಕು. ಬೆಳಗಾವಿ ಜಿಲ್ಲಾ ಪಂಚಾಯಿತಿಗೆ ಶಾಸನಬದ್ಧ ಅನುದಾನದ ಪ್ರಮಾಣ ಹೆಚ್ಚಳ ಕುರಿತು ಗ್ರಾಮೀಣಾಭಿವೃದ್ಧಿ ಇಲಾಖೆಯ ಸಚಿವರ ಜತೆ ವಿಸ್ತ್ರತ ಚರ್ಚೆ ನಡೆಸಲಿದ್ದೇನೆ. ಮುಂಬರುವ ದಿನಗಳಲ್ಲಿ ವಿವಿಧ ತಾಲೂಕುಗಳಲ್ಲಿ ಸಂಚರಿಸಿ ಜನರ ಸಮಸ್ಯೆ ಆಲಿಸುತ್ತೇನೆ ಎಂದು ಭರವಸೆ ನೀಡಿದ ಸಚಿವ ಶೆಟ್ಟರ್ ಅವರು, ಬೆಳೆಪರಿಹಾರ ತಾರತಮ್ಯ ಸರಿಪಡಿಸಬೇಕು ಎಂದು ತಿಳಿಸಿದರು.