ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ನಾಡದ್ರೋಹಿ ಎಂಇಎಸ್ ಮಹಾಮೇಳಾವ್ ನಡೆಸಲು ಸಿದ್ದತೆ ಮಾಡಿಕೊಳ್ಳುತ್ತಿದೆ. ಇದು ಗಡಿ ನಾಡ ಕನ್ನಡಿಗರ ಕಣ್ಣು ಕೆಂಪಾಗಿಸಿದೆ ಯಾವುದೇ ಕಾರಣಕ್ಕೂ ಮಹಾಮೇಳಾವ್ ನಡೆಸಲು ಅನುಮತಿ ನೀಡಬಾರದು ಜೊತೆಗೆ ಎಂಇಎಸ್ ಸಂಘಟನೆ ಬ್ಯಾನ್ ಮಾಡಿ ಗಡಿಪಾರು ಮಾಡಬೇಕು ಎಂದು ಕರವೇ ಶಿವರಾಮೇಗೌಡ ಬಣ ಬೆಳಗಾವಿ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.
ಎಂಇಎಸ್ ಪದೇ ಪದೆ ಗಡಿಯಲ್ಲಿ ಖ್ಯಾತೆ ತೆಗೆಯುವ ಕೆಲಸ ಮಾಡುತ್ತಲೇ ಬರುತ್ತಿದೆ. ಇತ್ತೀಚೆಗಷ್ಟೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕರಾಳ ದಿನಾಚರಣೆ ಮಾಡಲು ಬಂದು ಲಾಠಿ ಏಟು ತಿಂದ ಎಂಇಎಸ್ ನಾಯಕರು ಈಗ ಮತ್ತೆ ಬಾಲ ಬಿಚ್ಚಿದ್ದಾರೆ. ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನ ವೇಳೆ ಮಹಾಮೇಳಾವ್ ನಡೆಸಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ಮತ್ತೆ ಗಡಿ ಮತ್ತು ಭಾಷೆ ಹೆಸರಲ್ಲಿ ವಿಷ ಬೀಜ ಬಿತ್ತಲು ಮುಂದಾಗಿದೆ. ಇದರ ವಿರುದ್ಧ ಸಿಡಿದೆದ್ದಿರುವ ಕರವೇ ಕಾರ್ಯಕರ್ತರು ಚನ್ನಮ್ಮ ವೃತ್ತದ ಮುಂದೆ ಧರಣಿ ನಡೆಸಿದರು.
ಈ ವೇಳೆ ಮಾತನಾಡಿದ ಮುಖಂಡ ವಾಜೀದ್ ಹಿರೇಕೊಡಿ ಬೆಳಗಾವಿ ಎಂಇಎಸ್ ಅಪ್ಪನ ಆಸ್ತಿ ಅಲ್ಲ. ನಾಡದ್ರೋಹಿ ಕೃತ್ಯ ಮಾಡುವುದಿದ್ದರೆ ಮಹಾರಾಷ್ಟ್ರಕ್ಕೆ ಹೋಗಿ ಮಾಡಲಿ. ಇಲ್ಲಿ ಏನಾದರೂ ಬಾಲ ಬಿಚ್ಚಲು ಬಂದರೆ ನಿಮ್ಮ ಬಾಲವನ್ನು ನಾವು ಕಟ್ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಬಳಿಕ ಮತ್ತೋರ್ವ ಮುಖಂಡ ಮಹಾಂತೇಶ ರಣಗಟ್ಟಿಮಠ ಮಾತನಾಡಿ, ಅಧಿವೇಶನ ಮುಗಿಯೋವರೆಗೂ ಎಂಇಎಸ್ ಮುಖಂಡರು ಮತ್ತು ಕಾರ್ಯಕರ್ತರನ್ನು ಬೆಳಗಾವಿಯಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಭರದ ಸಿದ್ದತೆ: ಡಿ.4 ರಿಂದ ಚಳಿಗಾಲದ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ಸೌಧದ ಸ್ವಚ್ಛತೆ ಸೇರಿ ಇನ್ನಿತರ ಕಾರ್ಯಗಳು ಸಾಗಿವೆ. ಸೌಧದ ಪ್ರವೇಶ ದ್ವಾರಗಳ ಕಂಬಗಳು ಮತ್ತು ಒಳ ಛಾವಣಿಗೆ ಬಣ್ಣವನ್ನೂ ಬಳಿಯಲಾಗುತ್ತಿದೆ. ಇನ್ನು ವಿಧಾನಸಭೆ ಮತ್ತು ವಿಧಾನ ಪರಿಷತ್ ಸಭಾಂಗಣ, ಮುಖ್ಯಮಂತ್ರಿ, ಸಚಿವರು ಹಾಗೂ ಅಧಿಕಾರಿಗಳ ಕಚೇರಿ, ಸೌಧದ ಮೆಟ್ಟಿಲುಗಳು ಸೇರಿ ಇಡೀ ಸೌಧವನ್ನು ಸಿಬ್ಬಂದಿ ಸ್ವಚ್ಛಗೊಳಿಸುತ್ತಿದ್ದಾರೆ.
ಸುವರ್ಣಸೌಧಕ್ಕೆ ತೆರಳುವ ರಸ್ತೆಯ ವಿಭಜಕದಲ್ಲಿ ಅಲಂಕಾರಿಕ ಹೂವಿನ ಸಸಿಗಳನ್ನು ನೆಡಲಾಗುತ್ತಿದೆ. ಜಿನಿಯಾ, ಸಲಿಯಾ, ಪಿಂಟುನಿಯಾ, ಅಪೇಲಿಯಾ ಸೇರಿ ಮತ್ತಿತರ ಅಲಂಕಾರಿಕ ಹೂವುಗಳು ಸೌಧದ ಮೆರಗನ್ನು ಹೆಚ್ಚಿಸಲಿವೆ. ಇನ್ನು ಸುವರ್ಣಸೌಧ ಆವರಣದಲ್ಲಿ ನಿರ್ಮಿಸಿರುವ ಹೆಲಿಪ್ಯಾಡ್ ನಿಂದ ಸೌಧಕ್ಕೆ ಹೋಗಲು ಹೊಸದಾಗಿ ರಸ್ತೆ ಸಂಪರ್ಕ ಕಲ್ಪಿಸಲಾಗುತ್ತಿದೆ.
ಇದನ್ನೂ ಓದಿ: ಪಂಚರಾಜ್ಯ ಚುನಾವಣೆಯಲ್ಲಿ ಕನಿಷ್ಠ ಮೂರು ಕಡೆ ಅಧಿಕಾರ ಹಿಡಿಯುತ್ತೇವೆ : ಸಚಿವ ಎಂ ಬಿ ಪಾಟೀಲ್