ಬೆಳಗಾವಿ: ವಿವಾದಿತ ಸ್ಥಳದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿ ಮರುಸ್ಥಾಪನೆ ಮಾಡಲಾಗಿದೆ. ಜಿಲ್ಲೆಯ ಜನಪ್ರತಿನಿಧಿಗಳು ಮಾಧ್ಯಮ ಹೇಳಿಕೆ ನೀಡುವುದನ್ಜು ಬಿಟ್ಟು ಧೈರ್ಯವಿದ್ರೆ ರಾಯಣ್ಣ ಪುತ್ಥಳಿಗೆ ಮಾಲಾರ್ಪಣೆ ಮಾಡುವಂತೆ ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ ಆಗ್ರಹಿಸಿದರು.
ಬೆಳಗಾವಿಯಲ್ಲಿ ಈಟಿವಿ ಭಾರತದ ಜತೆಗೆ ಮಾತನಾಡಿದ ಅವರು, ಶಿವಾಜಿ ಪುತ್ಥಳಿ ಪ್ರತಿಷ್ಠಾಪನೆಯಾದಾಗ ಜಿಲ್ಲೆಯ ಜನಪ್ರತಿನಿಧಿಗಳು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸುತ್ತಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಸಂಗೊಳ್ಳಿ ರಾಯಣ್ಣ ಪ್ರಾಣ ತ್ಯಾಗ ಮಾಡಿದ್ದಾರೆ. ರಾಯಣ್ಣನ ಬಗ್ಗೆ ಹೇಳಿಕೆ ನೀಡುವ ಜಿಲ್ಲೆಯ 18 ಶಾಸಕರು ಮರುಪ್ರತಿಷ್ಠಾಪನೆ ಮಾಡಲಾಗಿರುವ ರಾಯಣ್ಣ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಬೇಕು ಎಂದು ಆಗ್ರಹಿಸಿದರು.
ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ಮಾತನಾಡಿ, ನಂದಗಡ ಸಂಪರ್ಕ ಕಲ್ಪಿಸುವ ಪೀರನವಾಡಿಯಲ್ಲಿ ರಾಯಣ್ಣನ ಪುತ್ಥಳಿ ನಿರ್ಮಾಣ ಆಗಬೇಕು ಎಂಬ ಬೇಡಿಕೆ ಇತ್ತು. ರಾಯಣ್ಣನ ಸಮಾಧಿ ದರ್ಶನಕ್ಕೆ ಮುನ್ನ ರಾಯಣ್ಣ ಪುತ್ಥಳಿಗೆ ಮಾಲಾರ್ಪಣೆ ಮಾಡಬೇಕು ಎಂಬ ಉದ್ದೇಶ ನಮ್ಮದು. 2018ರಲ್ಲಿ ಈ ಸಂಬಂಧ ಗ್ರಾಮ ಪಂಚಾಯತಿಯಲ್ಲಿ ಠರಾವ್ ಪಾಸ್ ಆಗಿದೆ. ಮೂರ್ತಿ ಪ್ರತಿಷ್ಠಾಪನೆಗೆ ಸ್ಥಳೀಯರ ವಿರೋಧವಿರಲ್ಲ. ಆದ್ರೆ ಸ್ಥಳೀಯ ಎಂಇಎಸ್ ಕಾರ್ಯಕರ್ತರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದರು. ಹೀಗಾಗಿ ಬೆಳಗಿನ ಜಾವ ಕನ್ನಡ ಸಂಘಟನೆ ಪದಾಧಿಕಾರಿಗಳು ಸೇರಿ ಮೂರ್ತಿ ಮರು ಪ್ರತಿಷ್ಠಾಪನೆ ಮಾಡಿದ್ದೇವೆ. ಇಲ್ಲವಾದ್ರೆ ನಗರದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗುತ್ತಿತ್ತು. ಹೀಗಾಗಿ ಈ ದಿಢೀರ್ ನಿರ್ಧಾರ ಕೈಗೊಂಡಿದ್ದೇವೆ. ಭಾಷಾ ಸೌಹಾರ್ದತೆ ಹಾಳು ಮಾಡುತ್ತಿರುವ ಎಂಇಎಸ್ ಕಾರ್ಯಕರ್ತರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.