ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ ಮತ್ತು ಎಂಇಎಸ್ನಿಂದ ಕರಾಳ ದಿನಾಚರಣೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಮೂವರು ಡಿಸಿಪಿಗಳ ನೇತೃತ್ವದಲ್ಲಿ 3,000ಕ್ಕೂ ಅಧಿಕ ಪೊಲೀಸರು 300ಅಧಿಕ ಸಿಸಿ ಕ್ಯಾಮೆರಾ ಬಳಸಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ನಾಳೆ(ನ.1ರಂದು) ಕುಂದಾನಗರಿ ಬೆಳಗಾವಿಯಲ್ಲಿ ನಡೆಯುವ ಅದ್ಧೂರಿ ಕನ್ನಡ ರಾಜ್ಯೋತ್ಸವ ಹಾಗೂ ಎಂಇಎಸ್ ಪುಂಡರ್ ಕರಾಳ ದಿನಾಚರಣೆ ಹಿನ್ನೆಲೆ ನಗರದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ವಹಿಸಿದ್ದು, ಮುಂಜಾಗ್ರತಾ ಕ್ರಮವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಬೆಳಗಾವಿ ನಗರ ಕಮಿಷನರ್ ಡಾ.ಎಂ.ಬಿ.ಬೋರಲಿಂಗಯ್ಯ ನೇತೃತ್ವದಲ್ಲಿ ಪೊಲೀಸ್ ವಾಹನಗಳ ರೂಟ್ ಮಾರ್ಚ್ ನಡೆಸಲಾಯಿತು.
ಈ ವೇಳೆ ನಗರದ ಚೆನ್ನಮ್ಮ ವೃತ್ತದಿಂದ ಆರಂಭವಾದ ಪೊಲೀಸ್ ವಾಹನಗಳ ರೂಟ್ ಮಾರ್ಚ್ ಬೋಗಾರವೇಸ್, ಕಿರ್ಲೋಸ್ಕರ್ ರಸ್ತೆ, ಹುತಾತ್ಮ ಚೌಕ್, ಮಾರುತಿ ಗಲ್ಲಿ, ನರಗುಂಧಕರ್ ಭಾವೆ ಚೌಕ್, ಕಂಬಳಿ ಕೂಟ ಗಣಪತಿ ಗಲ್ಲಿ, ಶನಿವಾರ ಕೂಟ, ಕಾಕತಿ ವೇಸ್ ಸೇರಿದಂತೆ ಇತರ ಮಾರ್ಗದಲ್ಲಿ ರೂಟ್ ಮಾರ್ಚ್ ನಡೆಯಿತು.
ಇನ್ನೂ ಕನ್ನಡ ರಾಜ್ಯೋತ್ಸವ ಭದ್ರತೆಗಾಗಿ 3ಡಿಸಿಪಿಗಳು, 12ಎಸಿಪಿಗಳು, 52ಇನ್ಸ್‌ಪೆಕ್ಟರ್‌ಗಳು, 2,500ಸಿಬ್ಬಂದಿಗಳ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಇದಲ್ಲದೇ 9ಸಿಎಆರ್ ತುಕಡಿಗಳು, 10ಕೆಎಸ್‌ಆರ್‌ಪಿ ತುಕಡಿಗಳು, 500 ಗೃಹರಕ್ಷಕರು, 8 ಡ್ರೋಣ್ ಕ್ಯಾಮೆರಾಗಳು, 300 ಸಿಸಿಟಿವಿ ಕ್ಯಾಮೆರಾ ಹಾಗೂ 35ವಿಡಿಯೋ ಕ್ಯಾಮೆರಾಗಳ ಬಳಸಿಕೊಳ್ಳಲಾಗುತ್ತಿದೆ ಎಂದು ಕಮಿಷನರ್ ಡಾ.ಎಂ.ಬಿ.ಬೋರಲಿಂಗಯ್ಯ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಇಸ್ರೋ ಮಾಜಿ ಅಧ್ಯಕ್ಷ ಕೆ ಸಿವನ್, ನಟ ದತ್ತಣ್ಣ, ಸಾಹಿತಿ ಕೃಷ್ಣೇಗೌಡ ಸೇರಿ 67 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ