ಚಿಕ್ಕೋಡಿ: ಉಪವಿಭಾಗದಲ್ಲಿ ಈಗಾಗಲೇ ಪ್ರವಾಹ ಪರಸ್ಥಿತಿ ಎದುರಾಗಿದ್ದು, ಮುಂಜಾಗೃತ ಕ್ರಮವಾಗಿ ಕಾಗವಾಡ ತಾಲೂಕಿನ ನದಿ ತೀರದ ಗ್ರಾಮಗಳ ಜನರಿಗೆ ಕಾಗವಾಡ ಪಿಎಸ್ಐ ಹಣಮಂತ ಧರ್ಮಟ್ಟಿ ಮುನ್ಸೂಚನೆ ನೀಡಿದರು.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜೂಗಳ ಗ್ರಾಮದ ಜನರಿಗೆ ಮುನ್ಸೂಚನೆ ನೀಡಿದ ಅವರು, ಈಗಾಗಲೇ ಕೃಷ್ಣಾ, ವೇದಗಂಗಾ ಹಾಗೂ ದೂಧಗಂಗಾ ನದಿಗಳ ನೀರಿನ ಹರಿವಿನಲ್ಲಿ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿನ ಮಳೆಯಿಂದಾಗಿ ಕೊಯ್ನಾ ಜಲಾಶಯದಿಂದ ನೀರು ಬಿಡುಗಡೆ ಮಾಡುತ್ತಿದ್ದಾರೆ. ಇದರಿಂದ ಕೃಷ್ಣಾ ನದಿ ಒಳ ಹರಿವು ಹೆಚ್ಚಾಗುತ್ತಿದ್ದು, ಮುಂಜಾಗೃತಾ ಕ್ರಮವಾಗಿ ತಾವು ಹಾಗೂ ದನಕರುಗಳು ಸುರಕ್ಷಿತ ಸ್ಥಳಕ್ಕೆ ತೆರಳುವುದು ಒಳಿತು ಎಂದರು.
ಯಾವ ಸಮಯದಲ್ಲಾದರೂ ನದಿ ನೀರು ಹೆಚ್ಚಾಗಬಹುದು. ಅದಕ್ಕಾಗಿ ಎಚ್ಚರಿಕೆಯಿಂದಿರಿ. 2,50,000 ಕ್ಯೂಸೆಕ್ ನೀರು ಬಂದರೆ ಜೂಗಳ, ಮಂಗಾವತಿ, ಶಹಾಪೂರ ಗ್ರಾಮದ ಜನರಿಗೆ ಪ್ರವಾಹ ಭೀತಿ ಎದುರಾಗಬಹುದು. ಈಗಾಗಲೇ ದಿನದಿಂದ ದಿನಕ್ಕೆ ನದಿ ನೀರು ಹೆಚ್ಚಾಗುತ್ತಿದ್ದು, ದಯಮಾಡಿ ಜಾನುವಾರುಗಳೊಂದಿಗೆ ಸುರಕ್ಷಿತ ಜಾಗಕ್ಕೆ ಸ್ಥಳಾಂತರವಾಗಿ ಎಂದು ತಿಳಿಸಿದರು.