ಚಿಕ್ಕೋಡಿ/ಬೆಳಗಾವಿ: ರಾಷ್ಟ್ರೀಯ ಪಕ್ಷಗಳ ಬೆಂಬಲಿಗರಿಂದ ತನಗೆ ಜೀವ ಬೆದರಿಕೆ ಇದೆ ಎಂದು ಕಾಗವಾಡದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ದೀಪಕ್ ಬುರ್ಲಿ ಆರೋಪಿಸಿದ್ದಾರೆ.
ನಿನ್ನೆ ತಡರಾತ್ರಿಯಿಂದ ದೀಪಕ್ ಬುರ್ಲಿ ಸಂಪರ್ಕಕ್ಕೂ ಸಿಕ್ಕಿರಲಿಲ್ಲ, ಜೊತೆಗೆ ಪೋನ್ ಸ್ವಿಚ್ ಆಫ್ ಮಾಡಿಕೊಂಡಿದ್ರು. ಈಗ ಅವರು ವಿಡಿಯೋವೊಂದನ್ನು ಮಾಡಿ ಪೋಸ್ಟ್ ಮಾಡಿದ್ದಾರೆ. ತನಗೂ ತನ್ನ ಬೆಂಬಲಿಗರಿಗೂ ಏನಾದರೂ ಆಗುವ ಭಯದಿಂದ ಮತಕ್ಷೇತ್ರ ಬಿಟ್ಟು ಹೊರ ಹೋಗಿದ್ದು, ಇಂದು ಸಾಯಂಕಾಲದ ನಂತರ ಮತಕ್ಷೇತ್ರಕ್ಕೆ ಬಂದು ಮತಯಾಚನೆ ಮಾಡಲಾಗುವುದು ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.
ಕಾಗವಾಡ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿ ದೀಪಕ್ ಬುರ್ಲಿ, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳ ಅಭ್ಯರ್ಥಿ ವಿರುದ್ಧ ಸ್ಪರ್ಧಿಸಿರುವ ಪತ್ರಕರ್ತ. ಇವರ ಅಬ್ಬರದ ಪ್ರಚಾರಕ್ಕೆ ಹೆದರಿ ಪ್ರಚಾರ ನಿಲ್ಲಿಸುವಂತೆ ಬೆದರಿಕೆ ಕರೆಗಳು ಬಂದಿದ್ದು, ಈ ಹಿನ್ನೆಲೆ ಅವರು ಮತಕ್ಷೇತ್ರ ಬಿಟ್ಟು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.