ಬೆಳಗಾವಿ : ಜಿಲ್ಲೆಯ ಬೈಲಹೊಂಗಲ, ಕಿತ್ತೂರು, ಗೋಕಾಕ ಸೇರಿದಂತೆ ವಿವಿಧೆಡೆ ರೈತರು ಸಾವಿರಾರು ಎಕರೆಯಲ್ಲಿ, ಕಳೆದ 15 ದಿನಗಳ ಹಿಂದೆ ಸೋಯಾಬಿನ್ ಬಿತ್ತನೆ ಮಾಡಿದ್ದರು. ಆದರೆ ಕಳಪೆ ಗುಣಮಟ್ಟದ ಬೀಜದಿಂದಾಗಿ ಬೀಜ ಮೊಳಕೆಯಾಗದೆ ರೈತ ಕಂಗಾಲಾಗಿದ್ದಾನೆ.
ಕೃಷಿ ಇಲಾಖೆ ವತಿಯಿಂದ ಪೂರೈಕೆಯಾಗಿದ್ದ ಬೀಜಗಳನ್ನು ಪಿಕೆಪಿಎಸ್‌ಗಳ ಮೂಲಕ ರೈತರಿಗೆ ವಿತರಿಸಲಾಗಿತ್ತು. ಆದರೆ ಬಿತ್ತನೆ ಮಾಡಿ ಹದಿನೈದು ದಿನಗಳೇ ಕಳೆದರೂ ಸೋಯಾಬಿನ್ ಬೀಜ ಮೊಳಕೆಯೊಡೆದಿಲ್ಲ. ಪ್ರತಿ ಎಕರೆಗೆ ಆರರಿಂದ ಎಂಟು ಸಾವಿರ ರೂಪಾಯಿ ಖರ್ಚು ಮಾಡಿ ಬಿತ್ತಿದ್ದ ಬೀಜ ಮೊಳಕೆಯೊಯಡೆದಿದ್ದಕ್ಕೆ ರೈತರು ಕಂಗಾಲಾಗಿದ್ದಾರೆ.
ಅಮರಾವತಿ, ಲಕ್ಷ್ಮೀ ಹಾಗೂ ವರದಾ ಕಂಪನಿಯ ಬೀಜಗಳು ಮೊಳಕೆಯೊಡೆದಿಲ್ಲ. ಜಿಲ್ಲೆಯಾದ್ಯಂತ 38 ಸಾವಿರ ಕ್ವಿಂಟಾಲ್ ಸೋಯಾಬಿನ್ ಬೀಜ ಪೂರೈಕೆ ಮಾಡಲಾಗುತ್ತಿದ್ದು ಇದರಲ್ಲಿ 10 ಸಾವಿರ ಕ್ವಿಂಟಾಲ್‌ಗೂ ಹೆಚ್ಚು ಬೀಜ ಕಳಪೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಕಳಪೆ ಬೀಜದಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಇದಕ್ಕೆ ಕೃಷಿ ಇಲಾಖೆಯ ಅಧಿಕಾರಿಗಳೇ ಹೊಣೆ ಎಂದು ರೈತರು ಆರೋಪಿಸಿದ್ದಾರೆ. ಕೃಷಿ ಇಲಾಖೆಯಿಂದ ಪೂರೈಕೆಯಾಗಿರುವ ಅಮರಾವತಿ ಕಂಪನಿಯ ಬೀಜದ ಚೀಲದ ಮೇಲೆ 2018 ನೇ ಇಸವಿ ಎಂದೂ ನಮೂದಿದೆ, ಅದನ್ನು ತಿದ್ದಿ 2020 ಎಂದು ಮಾಡಲಾಗಿದೆ ಎಂದು ರೈತರು ಆರೋಪಿಸಿದ್ದಾರೆ. ಇದೀಗ ಸೂಕ್ತ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಬೆಳಗಾವಿ ಜಿಲ್ಲಾಧಿಕಾರಿ ಡಾ.ಎಸ್. ಬಿ. ಬೊಮ್ಮನಹಳ್ಳಿ, ಕೃಷಿ ಇಲಾಖೆ ಜಂಟಿ ನಿರ್ದೇಶಕರ ಜೊತೆ ಮಾತನಾಡಿದ್ದೇನೆ. ಕಳೆದ ವರ್ಷ ಪ್ರವಾಹ ಬಂದಿದ್ದರಿಂದ ಶೇಕಡ 65 ರಷ್ಟು ಮಾತ್ರ ಮೊಳಕೆ ಪ್ರಮಾಣ ಇದೆ. ಮೊದಲು ರೈತರು ಒಂದೂವರೆ ಎಕರೆಗೆ ಒಂದು ಚೀಲ ಅಂದರೆ 30 ಕೆಜಿ ಸೋಯಾಬಿನ್ ಬೀಜ ಬಿತ್ತನೆ ಮಾಡುತ್ತಿದ್ರು. ಹಾಗಾಗಿ ಒಂದು ಎಕರೆಗೆ 30 ಕೆ.ಜಿ ಬಿತ್ತನೆ ಮಾಡಬೇಕು ಎಂದು ಸಲಹೆ ನೀಡಿದ್ದಾಗಿ ತಿಳಿಸಿದ್ದಾರೆ. ಬಿತ್ತನೆಯಾದ ಬೀಜಗಳು ಮೊಳಕೆಯೊಡೆಯದೇ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡುವ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.