ಬೆಳಗಾವಿ: ಕುಂದಾನಗರಿ ಬೆಳಗಾವಿಯ ಐದಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಡಾ.ಪುನೀತ್ ರಾಜಕುಮಾರ್ ಅಭಿನಯದ 'ಜೇಮ್ಸ್' ಚಿತ್ರ ಬಿಡುಗಡೆ ಆಗಲಿದ್ದು, ಥಿಯೇಟರ್ಗಳು ಮಧುವಣಗಿತ್ತಿಯಂತೆ ಸಿಂಗಾರಗೊಂಡಿವೆ.
ಬೆಳಗಾವಿಯ ಚಿತ್ರಾ ಥಿಯೇಟರ್ ಸೇರಿದಂತೆ 5 ಚಿತ್ರಮಂದಿರಗಳಲ್ಲಿ ಇಂದು ಬೆಳಗ್ಗೆ 9 ಗಂಟೆಯಿಂದ 'ಜೇಮ್ಸ್' ಫಸ್ಟ್ ಶೋ ಆರಂಭವಾಗಲಿದೆ. ಈ ಹಿನ್ನೆಲೆ ಅಪ್ಪು ಅಭಿಮಾನಿಗಳು ಚಿತ್ರಮಂದಿರದತ್ತ ಆಗಮಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಅಪ್ಪು ಯೂತ್ ಬ್ರಿಗೇಡ್ ಸೇರಿ ಇತರ ಅಭಿಮಾನಿ ಬಳಗಗಳಿಂದ ವಿವಿಧ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಅನ್ನ ಸಂತರ್ಪಣೆ, ರಕ್ತದಾನ, ಅನಾಥ ಮಕ್ಕಳಿಗೆ ಬುಕ್ಸ್ ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 11 ಗಂಟೆಗೆ ಅನಾಥಾಶ್ರಮದ ಮಕ್ಕಳಿಂದ ಕೇಕ್ ಕಟ್ ಮಾಡಿಸಿ ದಿವಂಗತ ಡಾ.ಪುನೀತ್ ರಾಜಕುಮಾರ್ 47ನೇ ಹುಟ್ಟುಹಬ್ಬ ಕಾರ್ಯಕ್ರಮ ನಡೆಸಲಾಗುತ್ತದೆ. ಕಾರ್ಯಕ್ರಮಕ್ಕೆ ಶಾಸಕ ಅನಿಲ್ ಬೆನಕೆ ಸೇರಿದಂತೆ ಹಲವರಿಗೆ ಆಹ್ವಾನ ನೀಡಲಾಗಿದೆ. ಅಪ್ಪು ಯೂತ್ ಬ್ರಿಗೇಡ್ ಹೆಸರಲ್ಲಿ ಟೀ ಶರ್ಟ್‌ಗಳನ್ನ ಪ್ರಿಂಟ್ ಮಾಡಿಸಲಾಗಿದ್ದು, ಸಂಜೆ ಅನಾಥಾಶ್ರಮಕ್ಕೆ ತೆರಳಿ ಬುಕ್‌ಗಳ ವಿತರಣೆ ಮಾಡಲಾಗುವುದು.
ಇದನ್ನೂ ಓದಿ: ರಾಮನಗರ ಚಿತ್ರಮಂದಿರದಲ್ಲಿ 'ಜೇಮ್ಸ್' ಚಿತ್ರ ವೀಕ್ಷಿಸಿದ ಅಪ್ಪು ಅಭಿಮಾನಿಗಳು