ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿ ಪರ್ವತ ಜೈನ ಆಶ್ರಮದ ಶ್ರೀ ಆಚಾರ್ಯ ಕಾಮಕುಮಾರ ನಂದಿ ಮಹಾರಾಜರು ಜುಲೈ 6 ರಂದು ನಾಪತ್ತೆ ಆಗಿದ್ದರು. ಎರಡು ದಿನದ ಬಳಿಕ ಅವರ ದೇಹ ಕೊಳವೆ ಬಾವಿಯಲ್ಲಿ ತುಂಡು ತುಂಡಾಗಿ ಶವವಾಗಿ ಪತ್ತೆಯಾಗಿದೆ. ರಾಯಬಾಗ ತಾಲೂಕಿನ ಕಡಕಬಾವಿ ಗ್ರಾಮದಲ್ಲಿ ಕೊಳವೆ ಬಾವಿಯಲ್ಲಿ ದೇಹ ಪತ್ತೆಯಾಗಿದ್ದು, ಹಂತಕರು ದೇಹವನ್ನು ಹಲವು ಭಾಗಗಳಾಗಿ ಕತ್ತರಿಸಿ ಕೊಳವೆ ಬಾವಿಯಲ್ಲಿ ಎಸಗಿದ್ದಾರೆ. ಸ್ವಾಮಿ ಕೊಲೆ ಪ್ರಕರಣ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಮೃತದೇಹದ 9 ಭಾಗಗಳನ್ನಾಗಿ ತುಂಡು ಮಾಡಲಾಗಿದೆ. ಎರಡು ಕೈ, ಎರಡು ಕಾಲು, ಎರಡು ಭಾಗ ತೊಡೆ, ತಲೆಯ ಎರಡು ಭಾಗ, ಹೊಟ್ಟೆ ಪ್ರತ್ಯೇಕವಾಗಿ ಕತ್ತರಿಸಿರುವ ಕ್ರೂರಿಗಳು ಜೈನಮುನಿಗಳ ಹತ್ಯೆ ಮಾಡಿ ಮೃತದೇಹ ಪೀಸ್ ಪೀಸ್ ಮಾಡಿ ಹಂತಕರು ಕೊಳವೆಬಾವಿಗೆ ಎಸೆದಿದ್ದಾರೆ ಎಂದು ಬೆಳಗಾವಿ ಪೊಲೀಸರು ತಿಳಿಸಿದ್ದಾರೆ.
ಖಟಕಬಾವಿ ಗ್ರಾಮದ ಗದ್ದೆಯಲ್ಲಿರುವ 400 ಅಡಿ ಆಳದ ಕೊಳವೆಬಾವಿಗೆ 25ನೇ ಅಡಿ ಆಳಕ್ಕೆ ರಕ್ತಸಿಕ್ತ ಸೀರೆ, ಟವೆಲ್ ನಲ್ಲಿ ಸ್ವಾಮೀಜಿ ದೇಹವನ್ನು ಗಂಟು ಕಟ್ಟಿ 30 ಅಡಿ ಆಳದಲ್ಲಿ ದೇಹದ 9 ಭಾಗಗಳನ್ನಾಗಿ ಮಾಡಿ ಹಾಕಲಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆಗೆ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಲು ಸಿದ್ಧತೆ ನಡೆಸಲಾಗಿದೆ ಎಂದು ಪೊಲೀಸರು ಮಾಹಿತಿ ಕೊಟ್ಟಿದ್ದಾರೆ.
ಜೈನ ಆಶ್ರಮ ಟ್ರಸ್ಟ್ದಿಂದ ನೀಡಿದ್ದ ಹಣ ವಾಪಸು ಕೇಳಿದ್ದಕ್ಕೆ ಕೊಲೆ: ಎಸ್ಪಿ ಮಾಹಿತಿ:- ಕೊಲೆ ಪ್ರಕರಣದ ಬಗ್ಗೆ ಮಾತನಾಡಿರುವ ಎಸ್ಪಿ ಸಂಜೀವ್ ಪಾಟೀಲ್, ಬುಧವಾರ ರಾತ್ರಿಯಿಂದ ಸ್ವಾಮೀಜಿ ಕಾಣೆಯಾಗಿರುವ ಬಗ್ಗೆ ಶುಕ್ರವಾರ ಭಕ್ತರು ದೂರು ನೀಡಿದ್ದರು. ಭಕ್ತರ ದೂರಿನ ಮೇರೆಗೆ ತನಿಖೆ ಕೈಗೊಂಡಿದ್ದೆವು. ಬುಧವಾರ ಹಾಗೂ ಹಿಂದಿನ ದಿನಗಳ ಘಟನಾವಳಿಗಳ ಬಗ್ಗೆ ತಾಳೆ ಹಾಕಿ ತನಿಖೆ ನಡೆಸಿದೆವು. ತನಿಖೆ ವೇಳೆ ಆಶ್ರಮಕ್ಕೆ ಯಾರು ಬಂದು ಹೋಗಿದ್ದರು ಎಂಬ ಬಗ್ಗೆ ವಿಚಾರಣೆ ನಡೆಸಲಾಯಿತು.
ಸ್ವಾಮೀಜಿಗೆ ಪರಿಚಯವಿದ್ದ ವ್ಯಕ್ತಿಯ ವಿಚಾರಣೆಗೊಳಪಡಿಸಿದೆವು. ಆ ವ್ಯಕ್ತಿ ಆಶ್ರಮದಲ್ಲಿ ಸ್ವಾಮೀಜಿಗಳನ್ನು ಕೊಲೆ ಮಾಡಿ ಬೇರೆಡೆ ಶವ ಬಿಸಾಕಿದ ಬಗ್ಗೆ ಮಾಹಿತಿ ನೀಡಿದ್ದಾನೆ. ಈ ಕೃತ್ಯಕ್ಕೆ ಸಹಕಾರ ನೀಡಿದ್ದ ಒಬ್ಬನನ್ನು ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದೇವೆ. ಸ್ವಾಮೀಜಿಗಳು ಜೈನ ಆಶ್ರಮ ಟ್ರಸ್ಟ್ನಿಂದ ಕೊಡಿಸಿದ್ದ ಹಣ ವಾಪಸ್ ಕೇಳಿದ್ದಕ್ಕೆ ಕೊಲೆ ಮಾಡಿದ್ದಾಗಿ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.
ಮೃತದೇಹದ ಶೋಧಕಾರ್ಯ ಸ್ಥಳಕ್ಕೆ ಯಾರಿಗೂ ಪ್ರವೇಶವಿಲ್ಲ. ಸಾಕ್ಷ್ಯಾಧಾರ ಕಲೆಹಾಕಿ ನ್ಯಾಯಾಲಯಕ್ಕೆ ನೀಡಬೇಕಿರುವ ಹಿನ್ನೆಲೆ ಸದ್ಯಕ್ಕೆ ಕಾರ್ಯಾಚರಣೆ ಸ್ಥಳದಲ್ಲಿ ಯಾರಿಗೂ ಪ್ರವೇಶವಿಲ್ಲ. ಪ್ರಕರಣದ ತನಿಖೆ ಮುಂದುವರಿದಿದೆ. ಬೇರೆ ವ್ಯವಹಾರ ಏನಾದರೂ ಇತ್ತಾ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಆರೋಪಿಗೆ ಜೈನ ಆಶ್ರಮ ಟ್ರಸ್ಟನಿಂದ ಕೊಡಿಸಿದ ಹಣವನ್ನು ಸ್ವಾಮೀಜಿ ವಾಪಸ್ ಕೇಳಿದ್ದಕ್ಕೆ ಹತ್ಯೆ ಮಾಡಲಾಗಿದೆ. ಆರೋಪಿಗಳು ಹೇಳಿದ ಹಲವು ಪ್ರದೇಶಗಳಲ್ಲಿ ಶೋಧ ಮಾಡಿದ್ದೇವೆ ಎಂದು ಎಸ್ಪಿ ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ.