ಬೆಳಗಾವಿ: ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್ ನೀಡಲಿದೆ ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ನೀಡಿರುವ ಹೇಳಿಕೆಯೇ ಅಧಿಕೃತ ಎಂದು ಹೇಳುವ ಮೂಲಕ ಸಚಿವ ಜಗದೀಶ ಶೆಟ್ಟರ್ ಮಾಜಿ ಸಚಿವ ಉಮೇಶ್ ಕತ್ತಿಗೆ ಟಾಂಗ್ ಕೊಟ್ಟಿದ್ದಾರೆ.
ಉಪಚುನಾವಣೆಯಲ್ಲಿ ಅನರ್ಹರ ದಾರಿಯೇ ಬೇರೆ, ನಮ್ಮ ದಾರಿಯೇ ಬೇರೆ. ಪಕ್ಷದ ಕಾರ್ಯಕರ್ತರಿಗೆ ಬಿಜೆಪಿ ಟಿಕೆಟ್ ನೀಡಲಿದೆ ಎಂಬ ಉಮೇಶ್ ಕತ್ತಿ ಹೇಳಿಕೆಗೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಅವರು, ಟಿಕೆಟ್ ನೀಡುವ ವಿಚಾರವಾಗಿ ಸಿಎಂ ಹೇಳಿಕೆಯೇ ಅಧಿಕೃತ. ಅವರಿಗೆ ಹಾಗೂ ಪಕ್ಷದ ಅಧ್ಯಕ್ಷರಿಗೆ ಈ ರೀತಿ ಹೇಳುವ ಅಧಿಕಾರ ಇದೆ. ಪಕ್ಷದ ತೀರ್ಮಾನದ ಮೇರೆಗೆ ಬಿಬಿಎಂಪಿ ಮೇಯರ್-ಉಪಮೇಯರ್ ಚುನಾವಣೆ ನಡೆದಿದೆ. ಆದರೆ ಮಾಧ್ಯಮಗಳೇ ಸಿಎಂ ಹಾಗೂ ಪಕ್ಷದ ಅಧ್ಯಕ್ಷರನ್ನು ಬೇರ್ಪಡಿಸುತ್ತಿವೆ ಎಂದರು.
ಕರ್ನಾಟಕದ ಪ್ರವಾಹದ ವೇಳೆ ಸುಮ್ಮನಿದ್ದು, ಉತ್ತರ ಭಾರತದ ಪ್ರವಾಹಕ್ಕೆ ಪ್ರಧಾನಿ ಮೋದಿ ಟ್ವಿಟ್ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಜಗದೀಶ್ ಶೆಟ್ಟರ್, ಅಮೆರಿಕಾದಲ್ಲಿ ನಡೆದ 'ಹೌಡಿ ಮೋದಿ' ಕಾರ್ಯಕ್ರಮದಲ್ಲೇ ಪ್ರಧಾನಿ ಕನ್ನಡದಲ್ಲಿ ಮಾತನಾಡಿದ್ದಾರೆ. ಕರ್ನಾಟಕದ ಪ್ರವಾಹದ ಸಂದರ್ಭದಲ್ಲಿ ಟ್ವೀಟ್ ಮಾಡದಿರುವುದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಸ್ಪಷ್ಟನೆ ಕೊಟ್ಟರು.