ಬೆಳಗಾವಿ: ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣದ ಸಂತ್ರಸ್ತೆಯ ರಕ್ಷಣೆಗೆ ನಿಲ್ಲುವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಯುವತಿಗೆ ಆಗಿರುವ ಅನ್ಯಾಯದ ಬಗ್ಗೆಯೂ ಎಸ್ಐಟಿ ತನಿಖೆ ನಡೆಸುತ್ತಿದೆ. ಯುವತಿ ದೂರು ನೀಡಿದ್ರೆ, ಸಿಎಂ ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ನಾನು ಕೂಡ ಸಂತ್ರಸ್ತೆಗೆ ರಕ್ಷಣೆ ನೀಡುತ್ತೇವೆ. ಸಂತ್ರಸ್ತೆ ತಪ್ಪು- ಮಾಡಿದ್ದಾಳೋ? ಇಲ್ಲವೋ? ಬೇರೆ ವಿಚಾರ. ಸಂತ್ರಸ್ತೆ ನಮ್ಮ ಬಳಿ ರಕ್ಷಣೆ ಕೋರಿದ್ದು, ಅದನ್ನು ನೀಡುವುದು ನಮ್ಮ ಕರ್ತವ್ಯ ಎಂದರು.
ದೂರು ಕೊಟ್ಟ ಬಳಿಕ ಯುವತಿ ಹೆದರಬೇಕಿಲ್ಲ. ಆಕೆಗೆ ಹಾಗೂ ಕುಟುಂಬಕ್ಕೆ ಸರ್ಕಾರ ರಕ್ಷಣೆ ನೀಡಲಿದೆ. ನಮ್ಮ ಇಲಾಖೆ ಕೂಡ ಯುವತಿ ಬೆನ್ನಿಗೆ ನಿಲ್ಲಲಿದೆ. ಮಹಿಳಾ ಆಯೋಗದಿಂದಲೂ ದೂರು ನೀಡಲು ಚಿಂತನೆ ನಡೆಸಿದ್ದೇವೆ. ಈ ಸಂಬಂಧ ಮಹಿಳಾ ಆಯೋಗದ ಜೊತೆಗೆ ಚರ್ಚಿಸುತ್ತೇನೆ. ಈಗಾಗಲೇ ನಮ್ಮ ಇಲಾಖೆಯಿಂದಲೂ ಗೃಹಸಚಿವರಿಗೆ ಪತ್ರ ಬರೆದು ಸಂತ್ರಸ್ತೆಗೆ ರಕ್ಷಣೆ ನೀಡುವಂತೆ ಕೋರಿದ್ದೇವೆ. ಗೃಹಸಚಿವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಯುವತಿ ಸಂಪರ್ಕಕ್ಕೆ ನಾವು ಪ್ರಯತ್ನಿಸಿದ್ದೇವೆ. ಆದರೆ, ಯುವತಿಯ ಸಂಪರ್ಕ ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.
ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳ ಗೆಲುವು ಶತಸಿದ್ಧ
ರಾಜ್ಯದಲ್ಲಿ ನಡೆಯುತ್ತಿರುವ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ದಾಖಲಿಸಲಿದೆ. ಬೆಳಗಾವಿ ಕ್ಷೇತ್ರದಲ್ಲಿ ಮಂಗಳಾ ಅವರಿಗೆ ಟಿಕೆಟ್ ನೀಡಿರುವುದು ಖುಷಿಯ ವಿಚಾರ. ಕ್ಷೇತ್ರದ ಜನರ ಹಾಗೂ ಅವರ ಕುಟುಂಬದ ಅಭಿಮಾನಿಗಳ ಆಶಯವೂ ಅದೇ ಆಗಿತ್ತು. ಸುರೇಶ್ ಅಂಗಡಿ ಕೂಡ ಸಾಕಷ್ಟು ಕೆಲಸ ಮಾಡಿದ್ದಾರೆ. ಮಂಗಳಾ ಗೆಲುವಿಗೆ ಈ ವಿಷಯ ಸಾಕಷ್ಟು ನೆರವಾಗಲಿದೆ. ಅಲ್ಲದೇ ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿ ಕೆಲಸಕ್ಕೆ ಜನರು ಮನ್ನಣೆ ನೀಡಲಿದ್ದಾರೆ. ಎದುರಾಳಿ ಯಾರೇ ಆಗಿರಲಿ, ನಮ್ಮ ಅಭ್ಯರ್ಥಿಗಳ ಗೆಲುವು ಶತಸಿದ್ಧ. ಬೆಳಗಾವಿಯಲ್ಲಿ ಮಹಿಳೆಗೆ ಟಿಕೆಟ್ ಸಿಕ್ಕಿರುವುದು ಖುಷಿಯ ವಿಚಾರ. ಸುರೇಶ್ ಅಂಗಡಿ ರೀತಿಯಲ್ಲಿಯೇ ಅವರು ಕೆಲಸ ಮಾಡುತ್ತಾರೆ ಎಂಬ ವಿಶ್ವಾಸ ನನ್ನದು ಎಂದರು.