ಬೆಳಗಾವಿ: ಮರಾಠಾ ಲಘು ಪದಾತಿ ದಳದಲ್ಲಿ ಫೆ. 27ರಂದು ಪ್ರಾರಂಭವಾಗಿದ್ದ ಭಾರತ-ಜಪಾನ್ ಜಂಟಿ ಸಮರಾಭ್ಯಾಸ ಇಂದು ಅಂತ್ಯವಾಗಿದೆ. ಭಾರತೀಯ ಸೇನೆಯಿಂದ ಜಪಾನ್ ಯೋಧರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಲಾಯಿತು.
ನಗರದ ಕ್ಯಾಂಪ್ ಪ್ರದೇಶದಲ್ಲಿರುವ ಮರಾಠಾ ಲೈಟ್ ಇನ್ಫಂಟ್ರಿ ರೆಜಿಮೆಂಟ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆದಿತ್ತು. ಹನ್ನೆರಡು ದಿನಗಳ ಕಾಲ ನಡೆದ ಸಮರಾಭ್ಯಾಸದಲ್ಲಿ ಎರಡು ದೇಶಗಳ ಯುದ್ಧದ ಕಾರ್ಯಾಚರಣೆ ಜೊತೆಗೆ ತಂತ್ರಜ್ಞಾನಗಳ ಬಗ್ಗೆ ತರಬೇತಿಯೂ ನಡೆದಿತ್ತು.
ಉಭಯ ದೇಶಗಳ ಸೇನಾ ಸಮರಾಭ್ಯಾಸದಲ್ಲಿ ಭಾರತೀಯ ಸೇನೆಯ 15ನೇ ಬೆಟಾಲಿಯನ್‌ನ ಮರಾಠಾ ಲೈಟ್ ಇನ್ಫಂಟ್ರಿ ರೆಜಿಮೆಂಟ್ ಹಾಗೂ ಜಪಾನ್ ಗ್ರೌಂಡ್ ಸೆಲ್ಫ್ ಡಿಫೆನ್ಸ್ ಫೋರ್ಸ್‌ನ 30ನೇ ದಳದ ತಲಾ 40 ಯೋಧರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ವಾರ್ಷಿಕ ತರಬೇತಿ ಧರ್ಮ ಗಾರ್ಡಿಯನ್ ಕಾರ್ಯಕ್ರಮದ ಅಂಗವಾಗಿ ಕರುನಾಡಿನಲ್ಲೇ ಈ ಸಮರಾಭ್ಯಾಸ ನಡೆದಿರೋದು ವಿಶೇಷವಾಗಿದೆ. ಜಾಗತಿಕ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಅನುಕೂಲಕರವಾಗಿರುವ ಈ ಸಮರಾಭ್ಯಾಸದಲ್ಲಿ ಕಾಡು, ಅರೆ ನಗರ, ನಗರ ಪ್ರದೇಶಗಳಲ್ಲಿನ ಕಾರ್ಯಾಚರಣೆಯ ಪ್ಲಟೂನ್ ಮಟ್ಟದ ತರಬೇತಿ ಕಾರ್ಯಕ್ರಮ, ಮನೆಗಳ ಮೇಲಿನ ಡ್ರಿಲ್‌ಗಳು, ಭಯೋತ್ಪಾದಕ ಅಡಗು ತಾಣಗಳ ಮೇಲೆ ದಾಳಿ ನಡೆದಾಗ ಕೈಗೊಳ್ಳಬೇಕಾದ ಕಾರ್ಯಾಚರಣೆಯ ತರಬೇತಿ ಸೇರಿ ವಿವಿಧ ಹಂತದ ಕಾರ್ಯಾಚರಣೆಗಳನ್ನು ನಡೆಸಲಾಯಿತು.
ಇದನ್ನೂ ಓದಿ: ಉಗ್ರ ಸಂಹಾರದ ರೋಮಾಂಚಕ ಪ್ರದರ್ಶನ: ಬೆಳಗಾವಿಯಲ್ಲಿ ಇಂಡೋ-ಜಪಾನ್ ಜಂಟಿ ಸಮರಾಭ್ಯಾಸ