ಅಥಣಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಎಡೆಬಿಡದೇ ಸುರಿಯುತ್ತಿರುವ ಭಾರಿ ಮಳೆಯಿಂದ ಕೃಷ್ಣಾ ನದಿಯಲ್ಲಿ ಕ್ಷಣಕ್ಷಣಕ್ಕೂ ನೀರಿನ ಮಟ್ಟ ಹೆಚ್ಚಳವಾಗುತ್ತಿದೆ. ಇದರಿಂದ ನದಿ ಪಾತ್ರದ ಜನರಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ.
ಅಥಣಿ ತಾಲೂಕಿನ 17 ಗ್ರಾಮಗಳು ಕಳೆದ ಬಾರಿ ಕೃಷ್ಣಾ ನದಿಯ ಜಲ ಪ್ರವಾಹದಿಂದ ತತ್ತರಿಸಿದ್ದವು. ಇದೀಗ ಮತ್ತೆ ನದಿಯಲ್ಲಿ ನೀರು ಏರುತ್ತಿರುವುದರಿಂದ ಭಯದ ವಾತಾವರಣ ನಿರ್ಮಾಣವಾಗಿದೆ. ಇನ್ನು ಮತ್ತೊಂದೆಡೆ ಕೊರೊನಾ ಸಹ ಕಾಡಲಾರಂಭಿಸಿದೆ.
ಅಥಣಿ ಸಮೀಪದ ಹಿಪ್ಪರಗಿ ಬ್ಯಾರೇಜ್ನಿಂದ 165000 ಕ್ಯುಸೆಕ್ಸ್ ನೀರು ಕೆಳಭಾಗಕ್ಕೆ ಹರಿಬಿಡಲಾಗುತ್ತಿದೆ. ಅಷ್ಟೇ ಪ್ರಮಾದ ಮಹಾರಾಷ್ಟ್ರ ರಾಜಾಪುರ ಡ್ಯಾಮ್ನಿಂದ ಒಳ ಹರಿವು ಇರುವುದರಿಂದ ಎಲ್ಲಾ ಗೇಟ್ಗಳ ಮುಖಾಂತರ ನೀರನ್ನು ಆಲಮಟ್ಟಿ ಜಲಾಶಯಕ್ಕೆ ಹರಿಸಲಾಗುತ್ತಿದೆ ಎಂದು ದೂರವಾಣಿ ಮೂಲಕ ಹಿಪ್ಪರಗಿ ನೀರಾವರಿ ಅಭಿಯಂತರ ವಿಠಲ್ ನಾಯಕ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು. ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು ನದಿ ಪಾತ್ರದ ಜನರಿಗೆ ತಮ್ಮ ಜಾನುವಾರುಗಳ ಸಮೇತ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಡಂಗುರ ಸಾರಲಾಗಿದೆ.