ಬೆಳಗಾವಿ: ವೈಟ್ ಬೋರ್ಡ್ ವಾಹನಗಳನ್ನು ವಾಣಿಜ್ಯ ಉದ್ದೇಶಕ್ಕೆ ಹೆಚ್ಚಾಗಿ ಬಳಸುತ್ತಿರುವ ಕಾರಣ ಅನಧಿಕೃತ ಕ್ಯಾಬ್ ಹಾವಳಿದಾರರನ್ನು ತಡೆಯುವುದೇ ಸಾರಿಗೆ ಅಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ. ಈ ಕುರಿತು ಬರುತ್ತಿರುವ ದೂರುಗಳು ಅಧಿಕವಾಗುತ್ತಿವೆ.
ಕೋಟಿ ಕೋಟಿ ನಷ್ಟ: ಬಿಳಿ ಬಣ್ಣದ ನಂಬರ್ ಪ್ಲೇಟ್ ಇರುವ ವಾಹನಗಳನ್ನು ಸ್ವಂತ ಬಳಕೆ ಹಾಗೂ ಹಳದಿ ಬಣ್ಣದ ನಂಬರ್ ಪ್ಲೇಟ್ ವಾಹನಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಬೇಕು ಎಂಬ ನಿಯಮವಿದೆ. ಆದರೆ ಬೆಳಗಾವಿ ವಿಭಾಗದಲ್ಲಿ ಈ ನಿಯಮ ಉಲ್ಲಂಘನೆ ತುಂಬಾ ಆಗುತ್ತಿದೆ ಎಂದರು.
ಹಳದಿ ನಂಬರ್ ಪ್ಲೇಟ್ ಹೊಂದಬೇಕಾದರೆ ಸಾರಿಗೆ ಇಲಾಖೆಯ ಅನುಮತಿ ಕಡ್ಡಾಯ. ಅದಕ್ಕಾಗಿ ಶುಲ್ಕ ನಿಗದಿ ಮಾಡಲಾಗಿದೆ. ಆದರೆ ಬೆಳಗಾವಿಯಲ್ಲಿ ಈ ನಿಯಮ ಉಲ್ಲಂಘನೆಯಾಗುತ್ತಿರುವ ಕಾರಣ ಸರ್ಕಾರದ ಖಜಾನೆ ಸೇರಬೇಕಿದ್ದ ಕೋಟಿ ಕೋಟಿ ಆದಾಯಕ್ಕೆ ಕೊಕ್ಕೆ ಬಿದ್ದಿದೆ.
ಅಲ್ಲದೆ ನಿಯಮಗಳನ್ನು ಪಾಲನೆ ಮಾಡುತ್ತಿರುವ ಕ್ಯಾಬ್‍ಗಳಿಗೆ ದೊಡ್ಡ ಪ್ರಮಾಣದ ನಷ್ಟವಾಗುತ್ತಿದೆ. ಹೀಗಾಗಿ ಶುಲ್ಕ ಪಾವತಿಸದೆ ಓಡಾಡುತ್ತಿರುವ ವಾಹನಗಳನ್ನು ನಿಯಂತ್ರಿಸಬೇಕು ಎಂಬ ಆಗ್ರಹಗಳು ಕೇಳಿ ಬರುತ್ತಿವೆ. ಆದರೆ ಅಧಿಕಾರಿಗಳು ಮಾತ್ರ ಅನಧಿಕೃತ ಕ್ಯಾಬ್‍ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿರುವುದು ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿದೆ.
ಸಿಕ್ಕಸಿಕ್ಕಲ್ಲಿ ದಂಡ: ಅನುಮತಿ ಇಲ್ಲದೆ ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತ್ತಿರುವ ವಾಹನಗಳ ಮೇಲೆ ಸಾರಿಗೆ ಅಧಿಕಾರಿಗಳು ಹದ್ದಿನ ಕಣ್ಣಿದ್ದಾರೆ. ಅದಕ್ಕಾಗಿ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಪ್ರಮುಖ ಸ್ಥಳಗಳಲ್ಲಿ ನಿಯೋಜಿಸಲಾಗುತ್ತಿದೆ. ದಾಖಲೆ ಕೊರತೆ, ಹೆಲ್ಮೆಟ್ ಬಳಸದಿರುವುದು ಹಾಗೂ ಅನಧಿಕೃತ ವಾಹನಗಳನ್ನು ತಡೆದಿದ್ದಕ್ಕೆ ಸಂಬಂಧಿಸಿದಂತೆ ಈ ವರ್ಷದಲ್ಲಿ 18,426 (ಬೆಳಗಾವಿ ವಿಭಾಗ) ಪ್ರಕರಣಗಳು ದಾಖಲಾಗಿವೆ.
ವಿಶೇಷ ತಂಡಗಳನ್ನು ರಚಿಸಿ, ಇಷ್ಟೆಲ್ಲ ದಂಡ ವಿಧಿಸುತ್ತಿದ್ದರೂ ಅನಧಿಕೃತ ವಾಹನಗಳ ಹಾವಳಿ ತಪ್ಪುತ್ತಿಲ್ಲ. ಅಂತಹ ವಾಹನಗಳನ್ನು ಸೀಜ್ ಮಾಡಬೇಕು. ಆಗ ಮಾತ್ರ ಅನಧಿಕೃತ ವಾಹನಗಳ ಮಾಲೀಕರಿಗೆ ಮೂಗುದಾರ ಹಾಕಲು ಸಾಧ್ಯ. ಇನ್ನಾದರೂ ಈ ಬಗ್ಗೆ ಕಠಿಣ ಕ್ರಮ ಜರುಗಿಸಬೇಕು ಎನ್ನುತ್ತಾರೆ ಕ್ಯಾಬ್ ಮಾಲೀಕರ ಸಂಘದ ಪದಾಧಿಕಾರಿಗಳು.
ಈಟಿವಿ ಭಾರತದೊಂದಿಗೆ ಮಾತನಾಡಿದ ಸಾರಿಗೆ ಇಲಾಖೆ ಬೆಳಗಾವಿ ವಿಭಾಗದ ಜಂಟಿ ಆಯುಕ್ತೆ ಎಂ.ಶೋಭಾ, ಅನಧಿಕೃತ ಕ್ಯಾಬ್ ಹಾವಳಿ ಹೆಚ್ಚಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ಕ್ರಮ ಜರುಗಿಸುವಂತೆ ಜಿಲ್ಲಾಮಟ್ಟದ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.