ಬೆಂಗಳೂರು/ಬೆಳಗಾವಿ: ಕೊರೊನಾ ಸೋಂಕು ಬೇರೆ ರಾಷ್ಟ್ರಗಳಲ್ಲಿ ಉಲ್ಬಣಗೊಂಡಿದೆ. ಈ ಬೆಳವಣಿಗೆ ರಾಜ್ಯದಲ್ಲಿ ಆತಂಕವನ್ನು ಸೃಷ್ಟಿಸಿದೆ. ಈ ಹಿನ್ನೆಲೆ ಮಧ್ಯಾಹ್ನ ಸಭೆ ನಡೆಯಲಿದ್ದು, ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಕೋವಿಡ್ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಕೆಲವು ಸೂಚನೆ ನೀಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇರೆ ಬೇರೆ ದೇಶಗಳಲ್ಲಿ ಕೋವಿಡ್ ದೊಡ್ಡ ಪ್ರಮಾಣದಲ್ಲಿ ಕಂಡು ಬರುತ್ತಿದೆ. ರೂಪಾಂತರ ತಳಿಗಳು ಕಾಣಿಸಿಕೊಂಡಿವೆ. ಹೊಸ ರೂಪಾಂತರಿ ವೇಗದಿಂದ ಹರಡುತ್ತಿದೆ ಎಂಬ ಮಾಹಿತಿಗಳು ಬರುತ್ತಿವೆ. ಈ ಹಿನ್ನೆಲೆ ಗುರುವಾರ ಮಧ್ಯಾಹ್ನ ಸಭೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಸರ್ಕಾರಿ ನೌಕರರ ನೂತನ ಪಿಂಚಣಿ ವ್ಯವಸ್ಥೆ ಕುರಿತು ಸದನದಲ್ಲಿ ಚರ್ಚಿಸಿದ ಬಳಿಕ ತೀರ್ಮಾನ : ಸಿಎಂ ಬೊಮ್ಮಾಯಿ
ಸಭೆಯಲ್ಲಿ ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆ ಮಾಡಲಾಗುವುದು. ಸಾರ್ವಜನಿಕರು ಭಯ, ಆತಂಕ ಪಡುವ ಅಗತ್ಯವಿಲ್ಲ. ತಜ್ಞರ ಸಲಹೆಯನ್ನು ಪಾಲನೆ ಮಾಡಿದರೆ ಕೋವಿಡ್ ಸಂಪೂರ್ಣ ನಿಯಂತ್ರಣ ಮಾಡಬಹುದು. ವಿಶೇಷವಾಗಿ ಬೂಸ್ಟರ್ ಡೋಸ್ ಬಗ್ಗೆಯೂ ವಿಶೇಷ ಕಾರ್ಯಕ್ರಮ ರೂಪಿಸಲು ಸಭೆಯಲ್ಲಿ ಚರ್ಚೆ ಮಾಡಲಾಗುತ್ತದೆ ಎಂದು ತಿಳಿಸಿದರು.