ಬೆಳಗಾವಿ: ಬೆಳಗಾವಿಯಿಂದ ಉತ್ತರಪ್ರದೇಶದ ಗೋರಖ್‌ಪುರಕ್ಕೆ ಇಂದು ಮತ್ತೊಂದು ವಿಶೇಷ ಶ್ರಮಿಕ ರೈಲು ಸಂಚಾರದ ಹಿನ್ನೆಲೆ, ರಣಬಿಸಿಲಿನಲ್ಲಿ ರೈಲ್ವೆ ಟಿಕೆಟ್ ಪಡೆಯಲು ಉತ್ತರ ಪ್ರದೇಶದ ಕಾರ್ಮಿಕರು ಪರದಾಟ ನಡೆಸಿದ್ದಾರೆ.
ನಗರದ ಸಿಪಿಎಡ್ ಮೈದಾನದಲ್ಲಿ ವಲಸೆ ಕಾರ್ಮಿಕರಿಗೆ ಎಂದು ರೈಲ್ವೆ ಟಿಕೆಟ್ ಪಡೆಯಲು ಹಾಗೂ ಹೆಸರು ನೋಂದಣಿಗೆ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾಡಳಿತದ ಅವ್ಯವಸ್ಥೆಗೆ ಕಾರ್ಮಿಕರು ಹೈರಾಣಾಗಿದ್ದು, ಬಿಸಿಲಿನ ಬೇಗೆ ತಾಳಲಾರದೇ ಸಾಮಾಜಿಕ ಅಂತರ ಮರೆತು ಮರದ ಕೆಳಗಡೆ ಆಶ್ರಯ ಪಡೆದು, ಜಿಲ್ಲಾಡಳಿತ ವಿರುದ್ಧ ಹಿಡಿಶಾಪ ಹಾಕುತ್ತಿದ್ದರು.
ವಿವಿಧ ಜಿಲ್ಲೆಗಳಿಂದ ಬೆಳಗಾವಿಗೆ ಆಗಮಿಸಿದ್ದ 1300ಕ್ಕೂ ಹೆಚ್ಚು ಕಾರ್ಮಿಕರು, ಇಂದು ಸಂಜೆ 5ಕ್ಕೆ ಹಾಗೂ ಸಂಜೆ 7 ಗಂಟೆಗೆ ಉತ್ತರಪ್ರದೇಶಕ್ಕೆ ರೈಲು ಹೊರಡಲಿದೆ ಎಂಬ ಮಾಹಿತಿ ತಿಳಿದು ಬೆಳ್ಳಂಬೆಳಗ್ಗೆಯಿಂದಲೇ ಮೈದಾನಕ್ಕೆ ಬಂದು ಟಿಕೆಟ್ಗಾಗಿ ಕಾದು ಕುಳಿತಿದ್ದರು.
ಈ ವೇಳೆ, ಮಾತಾನಾಡಿದ ಪಾಲಿಕೆ ಆಯುಕ್ತ ಜಗದೀಶ ಕೆ.ಎಚ್, ಈಗಾಗಲೇ 1300 ವಲಸೆ ಕಾರ್ಮಿಕರ ಟಿಕೆಟ್ಗಳನ್ನು ನೋಂದಣಿ ಮಾಡಿಕೊಂಡು ಟಿಕೆಟ್ ಸಿದ್ಧಪಡಿಸಲಾಗಿದೆ. ಇದನ್ನು ಬಿಟ್ಟು ಮತ್ತೆ ಯಾರಾದರೂ ವಲಸೆ ಕಾರ್ಮಿಕರು ಬಂದರೂ ಅವರನ್ನು ನೋಂದಣಿ ಮಾಡಿಕೊಂಡು ಅವರ ಜಿಲ್ಲೆಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಇದುವರೆಗೂ 4 ಸಾವಿರಕ್ಕೂ ಹೆಚ್ಚಿನ ಕಾರ್ಮಿಕರು ಜಿಲ್ಲೆಯಿಂದ ಅವರ ತವರು ರಾಜ್ಯಗಳಿಗೆ ಕಳುಹಿಸಲಾಗಿದೆ. ಅದರಲ್ಲಿ ರಾಜಸ್ಥಾನ, ಗುಜರಾತಿನ ಕಾರ್ಮಿಕರೇ ಹೆಚ್ಚಿದ್ದರು ಎಂದರು.