ಬೆಳಗಾವಿ : ಕೊರೊನಾ ಸೋಂಕು ಹರಡದಂತೆ ದೇಶಾದ್ಯಂತ ಲಾಕ್ಡೌನ್ ಜಾರಿ ಮಾಡಲಾಗಿದೆ. ಲಾಕ್ಡೌನ್ ಮಧ್ಯೆ ಕಳ್ಳತನದಿಂದ ಮದ್ಯ ಸಾಗಾಟದ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಿವೆ. ಈಗ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವಾಹನವೊಂದನ್ನು ತಡೆದಿರುವ ಬೆಳಗಾವಿ ಪೊಲೀಸರು ವಾಹನ ಹಾಗೂ ಗೋವಾ ಮದ್ಯ ವಶಪಡಿಸಿಕೊಂಡಿದ್ದಾರೆ. ತರಕಾರಿ ಪೂರೈಸುವ ವಾಹನದಲ್ಲಿ ಗೋವಾ ಮದ್ಯವನ್ನು ಬೆಳಗಾವಿಗೆ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಉದ್ಯಮಮಬಾಗ ಠಾಣೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದು, ಬಂಧಿತರಿಂದ 3.70 ಲಕ್ಷ ಮೌಲ್ಯದ ವಿವಿಧ ಕಂಪನಿಯ ಮದ್ಯ ಜಪ್ತಿಮಾಡಲಾಗಿದೆ.
ಪ್ರಕರಣ ಸಂಬಂಧ ನಗರದ ಮಂಜುನಾಥ ಪಾಟೀಲ ಹಾಗೂ ಸುಭಾಷ ಸುಧೀರಡೆಯನ್ನು ಬಂಧಿಸಲಾಗಿದೆ. ಬೆಳಗಾವಿಯಿಂದ ತರಕಾರಿ ಒಯ್ಯುಲು ಬಂದಿದ್ದ ವಾಹನದ ಟ್ರೇ ಹಿಂದೆ ಮದ್ಯದ ಬಾಕ್ಸ್ ಇಟ್ಟು ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಖಡೇ ಬಜಾರ್ ಎಸಿಪಿ ಚಂದ್ರಪ್ಪ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.