ಬೆಳಗಾವಿ: ನಾವು ಸಾಯುವವರೆಗೂ ಬಿಜೆಪಿಗೆ ಮರಳಿ ಹೋಗುವ ಪ್ರಶ್ನೆಯೇ ಇಲ್ಲ. ಇದು ನೂರಕ್ಕೆ ನೂರು ಸತ್ಯ. ಸತ್ತರೆ ನನ್ನ ಹೆಣವೂ ಬಿಜೆಪಿಗೆ ಹೋಗುವುದಿಲ್ಲ ಎಂದು ಕಾಂಗ್ರೆಸ್ ಶಾಸಕ ರಾಜು ಕಾಗೆ ಹೇಳಿಕೆ ನೀಡಿದರು. ಬೆಳಗಾವಿಯಲ್ಲಿ ಶುಕ್ರವಾರ ಮಾಧ್ಯಮಗಳ ಜತೆ ಮಾತನಾಡುತ್ತಿದ್ದ ಅವರು, ಮರಳಿ ಬಿಜೆಪಿ ಸೇರ್ಪಡೆಯಾಗುತ್ತೀರಾ ಎಂಬ ಪ್ರಶ್ನೆಗೆ ಈ ರೀತಿ ಉತ್ತರಿಸಿದರು.
ಮೈಸೂರು ಪ್ರವಾಸ ವಿಚಾರಕ್ಕೆ ಪ್ರತಿಕ್ರಿಯಿಸಿ, ಏನೂ ಇಲ್ಲ, ಪ್ರವಾಸಕ್ಕೆ ಹೋಗಿದ್ದೆವು. ಜೀವನದಲ್ಲಿ ಎಂದೂ ಮೈಸೂರಿಗೆ ಹೋಗಿರಲಿಲ್ಲ. ಹಾಗಾಗಿ, ಜೀವನದಲ್ಲಿ ಇದೇ ಮೊದಲ ಬಾರಿಗೆ ಮೈಸೂರಿಗೆ ಹೋಗಿದ್ದೆವು. ಸಚಿವ ಸತೀಶ ಜಾರಕಿಹೊಳಿ ಅವರು ನಮ್ಮ ಜತೆ ಇರಲಿಲ್ಲ. ಕಥೆ ಕಟ್ಟಿ ನೀವೇ (ಮಾಧ್ಯಮದವರು) ಅದಕ್ಕೆ ಹೆಚ್ಚು ಮಹತ್ವ ಕೊಡುತ್ತಿದ್ದೀರಿ. ಬೆಳಗಾವಿ ಜಿಲ್ಲೆಯಲ್ಲಿ ನಾಲ್ಕು ಜನ ಶಾಸಕರಿದ್ದು, ಪ್ರವಾಸ ಮಾಡಿದೆವು. ನಮಗೆ ಸತೀಶ್ ಜಾರಕಿಹೊಳಿ ಭೇಟಿ ಆಗಿಯೇ ಇಲ್ಲ ಎಂದರು.
ಸರ್ಕಾರದ ಪರ, ವಿರುದ್ಧ ಮಾತನ್ನೇ ನಾವು ಆಡಿಲ್ಲ. ಟೂರ್ ಮುಗಿಸಿ ಬಂದಿದ್ದೇವೆ ಅಷ್ಟೇ. ನಾಲ್ಕು ವರ್ಷ ಮತಕ್ಷೇತ್ರದಲ್ಲಿ ಸಾಯಬೇಕು. ಪ್ರತಿ ದಿನ ಜನರ ಸೇವೆ ಮಾಡುತ್ತಾ ಇರುತ್ತೇವೆ. ಎರಡು ದಿನ ವಿಶ್ರಾಂತಿಗೆ ಅಂತ ಹೋಗಿದ್ದೆವು. ಇದಕ್ಕೆ ಬೇರೆ ಬೇರೆ ಅರ್ಥ ಕಲ್ಪಿಸುವುದು ಬೇಡ. ನಾನು ಆಡಳಿತ ಚುರುಕಾಗಲಿ ಎಂದು ಹೇಳಿದ್ದು ತಪ್ಪಾ?. 5ನೇ ಸಲ ಎಂಎಲ್ಎ ಆಗಿದ್ದೇನೆ. ಜನರ ಬೇಡಿಕೆ, ಅಪೇಕ್ಷೆಗಳು ಹೆಚ್ಚಾಗಿದ್ದು, ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕಿದೆ. ಜನರಿಗೆ ಸ್ಪಂದಿಸಲು ಹೆಚ್ಚು ಅನುದಾನ ಕೊಡಬೇಕು ಎಂದು ಹೇಳಿದ್ದು ತಪ್ಪಾ? ಕ್ಷೇತ್ರದ ಅಭಿವೃದ್ಧಿ ಪ್ರಶ್ನೆ ಬಂದಾಗ ಮಾತಾಡಬೇಕಲ್ಲ ಎಂದರು.
ಎಲ್ಲಾ ಶಾಸಕರನ್ನು ಸಮಾನ ದೃಷ್ಟಿಯಿಂದ ನಮ್ಮ ಪಕ್ಷ ನೋಡುತ್ತಿದೆ. 135 ಶಾಸಕರನ್ನು ಮನೆ ಮಕ್ಕಳಂತೆ ಸಿಎಂ, ಡಿಸಿಎಂ ನೋಡಿಕೊಳ್ಳುತ್ತಿದ್ದಾರೆ. ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕಾರ ಲಕ್ಷಣ ಸವದಿ, ಬಾಬಾಸಾಹೇಬ್ ಪಾಟೀಲ್ ಸೇರಿ ನಾವೆಲ್ಲಾ ಒಂದೇ ಮನೆಯ ಮಕ್ಕಳು. ಯಾವುದೇ ವ್ಯತ್ಯಾಸ ನಮ್ಮ ಬಳಿ ಇಲ್ಲ ಎಂದು ತಿಳಿಸಿದರು.
ಮಾಜಿ ಸಿಎಂ ಜಗದೀಶ ಶೆಟ್ಟರ್ ಮತ್ತು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಭೇಟಿ ಬಗ್ಗೆ ಮಾತನಾಡಿ ಇಬ್ಬರು ಭೇಟಿಯಾಗಿರುವುದು ಅವರ ವೈಯಕ್ತಿಕ ವಿಚಾರ. ನನಗೆ ಅದೂ ಗೊತ್ತೂ ಇಲ್ಲ. ರಾಜಕೀಯದಲ್ಲಿ ಯಾರೂ ಶತ್ರುಗಳೂ ಇಲ್ಲ, ಮಿತ್ರರೂ ಇಲ್ಲ. ರಮೇಶ್ ಜಾರಕಿಹೊಳಿ ಅವರನ್ನು ಬಿಜೆಪಿಗೆ ಕರೆ ತರುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ಆ ಬಗ್ಗೆ ಹೈಕಮಾಂಡ್ ನಿರ್ಣಯ ತೆಗೆದುಕೊಳ್ಳುತ್ತದೆ. ನಾನು ಇನ್ನೂ ಸಣ್ಣವನು ಎಂದಷ್ಟೇ ಹೇಳಿದರು.
ಸರ್ಕಾರ ಅಭಿವೃದ್ದಿ ಕೆಲಸಗಳಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂಬ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ, ಬಸವೇಶ್ವರ ಏತನೀರಾವರಿ ಯೋಜನೆಗೆ ಇನ್ನೂ 100 ಕೋಟಿ ರೂ ಖರ್ಚು ಮಾಡಿದರೆ, ರೈತರಿಗೆ ತುಂಬಾ ಅನುಕೂಲ ಆಗಲಿದ್ದು, ದೇಶಕ್ಕೂ ಆಸ್ತಿ ಆಗಲಿದೆ. ಇದಕ್ಕೆ ಸಹಕಾರ ಮಾಡಿ ಎಂದು ಕೇಳಿದ್ದೇವೆ. ಈ ಬಗ್ಗೆ ಸಭೆ ಮಾಡಿ ಎಂದು ಸಿಎಂಗೆ ಮನವಿ ಮಾಡಿದ್ದೇವೆ. ಇನ್ನೂ 20 ವರ್ಷ ನಾವೇ ಆಡಳಿತ ಮಾಡುತ್ತೇವೆ. ಶರೀರ ಎಂದ ಮೇಲೆ ನೆಗಡಿ, ಕೆಮ್ಮು, ಜ್ವರ ಇರ್ತಾವೆ. ಅದನ್ನೆಲ್ಲಾ ಸರಿ ಮಾಡಿಕೊಳ್ಳುತ್ತೇವೆ. ಮನೆ ಎಂದ ಮೇಲೆ ಸಣ್ಣ, ಪುಟ್ಟ ವ್ಯತ್ಯಾಸ ಇರುತ್ತವೆ, ಅವುಗಳನ್ನು ಸರಿ ಮಾಡಿಕೊಳ್ಳುತ್ತೇವೆ ಎಂದು ರಾಜು ಕಾಗೆ ಉತ್ತರಿಸಿದರು.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ಎಟಿಎಂ ಕಲೆಕ್ಷನ್ನ ವಂಶಾವಳಿ ಹೆಸರಿನ ಪೋಸ್ಟರ್ ರಿಲೀಸ್ ಮಾಡಿದ ಕೇಸರಿ ಪಡೆ