ಚಿಕ್ಕೋಡಿ: ಮುಸ್ಲಿಂ ಸಮುದಾಯವೇ ಇಲ್ಲದ ಈ ಗ್ರಾಮದಲ್ಲಿ ಮೊಹರಂ ಹಬ್ಬವನ್ನು ವಿಧಿವತ್ತಾಗಿ ಆಚರಿಸಲಾಗುತ್ತದೆ. ಹಿಂದೂಗಳೇ ಮೊಹರಂ ಅಂಗವಾಗಿ 10 ದಿನಗಳವರೆಗೆ ಪಂಜಾಗಳನ್ನು ಪ್ರತಿಷ್ಠಾಪಿಸುತ್ತಾರೆ. ಪಕ್ಕದ ಗ್ರಾಮದಿಂದ ಖಾಜಿ ಒಬ್ಬರನ್ನು ಕರೆಸಿ, ಮೊಹರಂ ಆಚರಿಸುವ ಮೂಲಕ ಮಾದರಿಯಾಗಿದ್ದು, ಭಾವೈಕ್ಯದ ಬೆಸುಗೆಯ ಪಾಠ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೋರಗಾಂವ ವಾಡಿ ಗ್ರಾಮ ಎಲ್ಲರ ಗಮನ ಸೆಳೆಯುತ್ತಿದೆ. ಸುಮಾರು 2,500 ಜನಸಂಖ್ಯೆ ಇರುವ ಪುಟ್ಟ ಗ್ರಾಮವಿದು. ಇಲ್ಲಿ 6 ಪಂಜಾಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಪೂಜಾ ವಿಧಿಯನ್ನು ಲಿಂಗಾಯತ ಸಮುದಾಯದವರು ನೆರವೇರಿಸುತ್ತಾರೆ.
10 ದಿನ ಉಪವಾಸ ವ್ರತವನ್ನೂ ಕೂಡಾ ಕೈಗೊಳ್ಳುತ್ತಾರೆ. ಕೊನೆ ದಿನ ಪಂಜಾವನ್ನು ವಿಧಿವತ್ತಾಗಿ ನಿಮಜ್ಜನೆ ಮಾಡಲಾಗುತ್ತದೆ. ಈ ಪರಂಪರೆ ಸುಮಾರು 300ಕ್ಕೂ ಅಧಿಕ ವರ್ಷಗಳ ಹಿಂದಿನಿಂದ ಬಂದಿದೆ ಎಂಬುದು ಮತ್ತೊಂದು ವಿಶೇಷ.