ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡ ಪರ ಸಂಘಟನೆಗಳಿಂದ ಧ್ವಜಸ್ತಂಭ ಅಳವಡಿಸಲಾಗಿದೆ. ಈ ವೇಳೆ ಪೊಲೀಸರು ಹಾಗೂ ಕನ್ನಡ ಪರ ಸಂಘಟನೆ ಕಾರ್ಯಕರ್ತರ ನಡುವರ ಮಾತಿನ ಚಕಮಕಿ ನಡೆದಿದೆ.
ಪೊಲೀಸರ ಕಣ್ತಪ್ಪಿಸಿ ಹೆಗಲ ಮೇಲೆ ಧ್ವಜ ಹೊತ್ತು ತಂದ ಕನ್ನಡ ಸಂಘಟನೆ ಮುಖಂಡರು ಪಾಲಿಕೆ ಎದುರು ಧ್ವಜಸ್ತಂಭ ಅಳವಡಿಕೆಗೆ ಮುಂದಾದರು. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಧ್ವಜಸ್ತಂಭ ಅಳವಡಿಕೆ ಯತ್ನ ವಿಫಲಗೊಳಿಸಲು ಮುಂದಾದರು. ಹೋರಾಟಗಾರರ ಬಳಿಯಿದ್ದ ಮೊಳೆ, ಸುತ್ತಿಗೆ ಕಸಿದುಕೊಂಡರು. ಈ ವೇಳೆ ಪೊಲೀಸರು ಹಾಗೂ ಕನ್ನಡ ಹೋರಾಟಗಾರರ ಮಧ್ಯೆ ವಾಗ್ವಾದ ನಡೆಯಿತು.
ಕನ್ನಡದ ಶಲ್ಯವನ್ನು ಧ್ವಜಸ್ತಂಭಕ್ಕೆ ಕಟ್ಟಿಕೊಂಡು, ಬಳಿಕ ಧ್ವಜಸ್ತಂಭಕ್ಕೆ ಸಿಮೆಂಟ್ ಅಳವಡಿಸಿ ಸ್ಥಳದಲ್ಲೇ ಹೋರಾಟಗಾರರು ಠಿಕಾಣಿ ಹೂಡಿದ್ದಾರೆ. ಧ್ವಜಸ್ತಂಭ ಅಳವಡಿಕೆ ನಂತರ ಹೋರಾಟಗಾರರು ರಾಷ್ಟ್ರಗೀತೆ ಹಾಡಿದ್ದಾರೆ. ಸದ್ಯ ಪಾಲಿಕೆ ಎದುರು ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಪಾಲಿಕೆ ಎದುರು ಕನ್ನಡ ಧ್ವಜಸ್ತಂಭ ಅಳವಡಿಸಬೇಕು ಎಂದು ದಶಕಗಳಿಂದ ಹೋರಾಟ ನಡೆಯುತ್ತಲೇ ಇದ್ದವು. ಆದರೆ ಅದು ಸಾಧ್ಯವಾಗಿರಲಿಲ್ಲ. ಇದೀಗ ಬಹುದಿನಗಳ ಕನಸು ಈಡೇರಿದಂತಾಗಿದೆ.
ಪಾಲಿಕೆ ಎದುರು ಧ್ವಜಸ್ತಂಭ ಅಳವಡಿಕೆ..ಹೋರಾಟಗಾರರ ಪ್ರತಿಕ್ರಿಯೆ:
ಕನ್ನಡಪರ ಹೋರಾಟಗಾರ ಶ್ರೀನಿವಾಸ ತಾಳೂರಕರ ಸಾರಥ್ಯದಲ್ಲಿ ಕನ್ನಡ ಪರ ಹೋರಾಟಗಾರರು ಬೆಳಗಾವಿ ಮಹಾನಗರ ಪಾಲಿಕೆಯ ಎದುರು ಕನ್ನಡದ ಧ್ವಜ ಹಾರಿಸುವ ಮೂಲಕ ಕನ್ನಡಿಗರ ಬಹು ದಿನಗಳ ಕನಸನ್ನ ನನಸಾಗಿಸಿದ್ದಾರೆ.
ಈ ಬಗ್ಗೆ ಶ್ರೀನಿವಾಸ ತಾಳೂರಕರ ಮಾತನಾಡಿ, ನಮಗೆ ಮರಾಠಿಗರು, ಪಾಲಿಕೆಯವರು ವಿರೋಧಿಸುತ್ತಿಲ್ಲ. ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಪೊಲೀಸರು ನಮ್ಮ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಕನ್ನಡ ಧ್ವಜಸ್ತಂಭ ಅಳವಡಿಕೆಗೆ ಯಾರ ಅನುಮತಿ ಬೇಕಿಲ್ಲ. ರಾಜ್ಯ ಸರ್ಕಾರದ ಕನ್ನಡ ಅನುಷ್ಠಾನ ಕೇವಲ ಕಾಗದಕ್ಕೆ ಸೀಮಿತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಬೆಂಕಿ ಹಾಕುವ ಕೆಲಸ ಮಾಡಬೇಡಿ:
ಕನ್ನಡಪರ ಸಂಘಟನೆಗಳಿಂದ ಮಹಾನಗರ ಪಾಲಿಕೆ ಎದುರು ಧ್ವಜಸ್ತಂಭ ಅಳವಡಿಕೆ ಹಿನ್ನೆಲೆ ಸ್ಥಳಕ್ಕೆ ಎಸಿಪಿ, ಸಿಪಿಐ ಸೇರಿದಂತೆ ಹಿರಿಯ ಅಧಿಕಾರಿಗಳು ಕನ್ನಡ ಬಾವುಟ ತೆರವುಗೊಳಿಸಲು ಯತ್ನಿಸಿದರು. ಈ ವೇಳೆ ಪೊಲೀಸರು ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ಆಗ ಮಾರ್ಕೆಟ್ ಠಾಣೆಯ ಪಿಐ ಅವರು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡಿದ್ದು, ಪೊಲೀಸ್ ಹಾಗೂ ನನ್ನ ತಾಕತ್ತಿನ ಬಗ್ಗೆ ಮಾತನಾಡಬೇಡಿ. ಅನುಮತಿ ಇಲ್ಲದೇ ಯಾಕೆ? ಧ್ವಜಸ್ತಂಭ ಅಳವಡಿಸಿದ್ದೀರಾ?. ಬೆಳಗಾವಿಯಲ್ಲಿ ಬೆಂಕಿ ಹಾಕುವ ಕೆಲಸ ಮಾಡಬೇಡಿ ಎಂದು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಕನ್ನಡಪರ ಹೋರಾಟಗಾರರು, ನಾವೇನು ಬೆಳಗಾವಿಯಲ್ಲಿ ಬೆಂಕಿ ಹಾಕುತ್ತಿಲ್ಲ. ಕನ್ನಡ ನೆಲದಲ್ಲಿ ಕನ್ನಡ ಬಾವುಟ ಹಾರಿಸಲು ಯಾರ ಅನುಮತಿ ಪಡೆಯಬೇಕಿಲ್ಲ. ಬೇಕಿದ್ದರೆ, ನಮ್ಮ ಮೇಲೆ ಕೇಸ್ ಹಾಕಿ ಕ್ರಮ ಕೈಗೊಳ್ಳಿ. ಆದ್ರೆ, ಕಾನೂನು ಕಾಪಾಡುವ ನೀವು ನನ್ನ ಬಟ್ಟೆ ಹರಿದು ಹಾಕಿದ್ದೀರಿ. ನಮ್ಮ ಮೇಲೆ ದಬ್ಬಾಳಿಕೆ, ಹಲ್ಲೆ ಮಾಡುತ್ತಿರುವುದು ನೀವು ಎಂದು ಆಕ್ರೋಶ ವ್ಯಕ್ತಪಡಿಸಿದರು.