ಬೆಳಗಾವಿ : ಊರಿನ ಜನರು ಮಲಗಿದ ಮೇಲೆ ವಾಕಿಂಗ್ ಹೋಗಿ ಬರೋಣ ಬಾ ಅಂತಾ ಹೇಳಿ ಕರೆದುಕೊಂಡು ಹೋದ ಪತಿರಾಯನೋರ್ವ ತನ್ನ ಮೂರು ತಿಂಗಳ ಗರ್ಭಿಣಿ ಪತ್ನಿಯನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾದ ಘಟನೆ ತೋರಣಗಟ್ಟಿ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ತೋರಣಗಟ್ಟಿ ಗ್ರಾಮದ ರವಿ ಗೂರ್ಲಹೊಸುರ (33) ಕೊಲೆ ಆರೋಪಿ. ಆತನ ಪತ್ನಿ ಶೈಲಾ (28) ಕೊಲೆಯಾದ ಗರ್ಭಿಣಿ. ಆರೋಪಿ ಕಳೆದ ಆರು ವರ್ಷಗಳ ಹಿಂದೆ ಬಾಗಲಕೋಟೆ ಜಲ್ಲೆಯ ಇಳಕಲ್ ಗ್ರಾಮದ ಈರಮ್ಮ ಜಾಲಿಹಾಳ ಎಂಬುವರ ಮಗಳಾದ ಶೈಲಾ ಅವರನ್ನು ಎರಡು ಕುಟುಂಬಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದ. ದಂಪತಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಕ್ಕಳು ಇದ್ದಾರೆ. ಇದೀಗ ಶೈಲಾ ಮೂರು ತಿಂಗಳ ಗರ್ಭಿಣಿ ಆಗಿದ್ದಳು ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ.
ಮೊದ ಮೊದಲಿಗೆ ಹೆಂಡತಿಯನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ ರವಿ, ದಿನಕಳೆದಂತೆ ಪ್ರತಿದಿನ ಕುಡಿದು ಬಂದು ವರದಕ್ಷಿಣೆ ನೀಡುವಂತೆ ಹೆಂಡತಿಗೆ ಕಿರುಕುಳ ನೀಡಿ ಹೆಂಡತಿಯ ಮೇಲೆ ಪದೇ ಪದೇ ಹಲ್ಲೆ ಮಾಡಲು ಆರಂಭಿಸಿದ್ದಾನೆ. ಈ ವಿಷಯವನ್ನು ತನ್ನ ಸಹೋದರ ಸೇರಿದಂತೆ ತಂದೆ-ತಾಯಿಗೆ ಪತ್ನಿ ತಿಳಿಸಿದ್ದಾಳೆ.
ಬಾಗಲಕೋಟೆ ಜಲ್ಲೆಯ ಇಳಕಲ್‌ನಲ್ಲಿ ಶೈಲಾ ತಂದೆ, ಆಗಾಗ ಅಳಿಯ ಕೇಳಿದಷ್ಟು ದುಡ್ಡು, ಚಿನ್ನ ಕೂಡ ಕೊಟ್ಟಿದ್ದಾರೆ. ಇಷ್ಟಾದರೂ ರವಿ ಕಿರುಕುಳ ನೀಡುವುದನ್ನ ನಿಲ್ಲಿಸಿಲ್ಲ. ಕಳೆದ ಹಲವು ದಿನಗಳ ಹಿಂದಷ್ಟೇ ಶೈಲಾನ ಚಿಕ್ಕ ಸಹೋದರಿಯ ಮದುವೆ ಆಗಿತ್ತಂತೆ. ಅವಳಿಗೆ ಹೆಚ್ಚು ಬಂಗಾರ ಹಾಗೂ ಹಣ ಕೊಟ್ಟಿದ್ದೀರಿ. ನನಗೂ ಅವರಿಗೆ ಕೊಟ್ಟಷ್ಟು ವರದಕ್ಷಿಣೆ ಕೊಡಬೇಕೆಂದು ಪೀಡಿಸಿದ್ದಾನೆ.
ಮಗಳು ಚೆನ್ನಾಗಿದ್ರೆ ಅಷ್ಟೇ ಸಾಕು ಅಂದುಕೊಂಡ ಶೈಲಾಳ ತಂದೆ ಹಣ ಕೊಡುವುದಾಗಿ, ಸ್ವಲ್ಪ ದಿನ ಕಾಯುವಂತೆ ಮಗಳಿಗೆ ಹೇಳಿದ್ದಾನೆ. ಆದ್ರೆ, ಕಳೆದ ನಾಲ್ಕು ದಿನಗಳ ಹಿಂದೆ ಕುಡಿದು ಬಂದು ಹೆಂಡತಿ ಮೇಲೆ ಹಲ್ಲೆ ಮಾಡಿದ್ದಾನೆ.
ಇದಾದ ಬಳಿಕ ಹೆಂಡತಿಯನ್ನು ಸಮಾಧಾನಪಡಿಸಿ ಊರಿನ ಜನರು ಮಲಗಿದ ಮೇಲೆ ವಾಕಿಂಗ್ ಹೋಗಿ ಬರೋಣ ಬಾ ಅಂತಾ ಕರೆದುಕೊಂಡು ಹೋಗಿ ಕುತ್ತಿಗೆಗೆ ಹಗ್ಗ ಬಿಗಿದು ಮೆಕ್ಕೆಜೋಳದ ಹೊಲದಲ್ಲಿ ಕೊಲೆ ಮಾಡಿ ನೇರವಾಗಿ ಕಟಕೋಳ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ರವಿ ಒಬ್ಬನೇ ಈ ಕೊಲೆ ಮಾಡಿಲ್ಲ, ಆತನೊಂದಿಗೆ ಇನ್ನೂ ನಾಲ್ಕು ಜನ ಸ್ನೇಹಿತರು ಸೇರಿಕೊಂಡು ಕೊಲೆ ಮಾಡಿದ್ದಾರೆ. ಈತನಿಗೆ ಮೊದಲೇ ಬೇರೊಂದು ಮಹಿಳೆಯ ಜೊತೆಗೆ ಮದುವೆ ಆಗಿದ್ದು, ಹೀಗಾಗಿ ತಮ್ಮ ಮಗಳನ್ನು ಕೊಲೆ ಮಾಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.
ಕಟಕೋಳ ಪೊಲೀಸ್ ಠಾಣೆಯಲ್ಲಿ ಕೇವಲ ಗಂಡನ ವಿರುದ್ಧ ಮಾತ್ರ ಕೇಸ್ ದಾಖಲಿಸಿಕೊಂಡಿದ್ದು, ಆತನೊಂದಿಗೆ ಇದ್ದು ಕೊಲೆ ಮಾಡಲು ಸಹಾಯ ಮಾಡಿದವರ ವಿರುದ್ಧ ಪೊಲೀಸರು ಕೇಸ್ ದಾಖಲಿಸಿಕೊಳ್ಳುತ್ತಿಲ್ಲ ಎಂದು ಮಹಿಳೆಯ ಕುಟುಂಬಸ್ಥರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ನ್ಯಾಯ ಕೇಳಲು ಪೊಲೀಸ್ ಠಾಣೆಗೆ ಹೋದ್ರೆ ಪೊಲೀಸರು ಕೂಡ ಸರಿಯಾಗಿ ಸ್ಪಂದಿಸಿಲ್ಲ. ಪ್ರಕರಣದಲ್ಲಿ ಶಾಮೀಲಾಗಿರುವ ಎಲ್ಲಾ ಆರೋಪಿಗಳ ಬಂಧನ ಆಗಬೇಕು. ನಮ್ಮ ಮಗಳ ಸಾವಿಗೆ ಹಾಗೂ ತಾಯಿಯನ್ನು ಕಳೆದುಕೊಂಡಿರುವ ಇಬ್ಬರು ಮಕ್ಕಳಿಗೆ ನ್ಯಾಯ ಸಿಗಬೇಕೆಂದು ಮಹಿಳೆಯ ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ.
ದೇಶದಲ್ಲಿ ವರದಕ್ಷಣೆ ವಿರುದ್ಧ ಎಷ್ಟೇ ಕಠಿಣ ಕಾನೂನು ಜಾರಿಗೆ ತಂದರೂ ಈ ವರದಕ್ಷಿಣೆ ಪಿಡುಗು ಮಾತ್ರ ದೇಶದಿಂದ ತೊಲಗುತ್ತಿಲ್ಲ. ಇತ್ತ ವರದಕ್ಷಿಣೆ ಆಸೆಗೆ ಹೆಂಡತಿಯನ್ನು ಕೊಲೆ ಮಾಡಿದ ಆರೋಪಿ ಜೈಲು ಸೇರಿದ್ರೆ, ಕೊಲೆಯಾದವಳು ಮಣ್ಣು ಸೇರಿದ್ದಾಳೆ. ಏನು ತಪ್ಪು ಮಾಡದ ಮುಗ್ಧ ಮಕ್ಕಳಿಬ್ಬರು ಅನಾಥವಾಗಿದ್ದಾರೆ.