ಚಿಕ್ಕೋಡಿ: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಈ ಮೂರು ಪಕ್ಷದಲ್ಲಿ ಯಾರು ಸರ್ಕಾರ ರಚಿಸಿದರೂ ಹುಕ್ಕೇರಿ ತಾಲೂಕಿಗೆ ಒಂದು ಸಚಿವ ಸ್ಥಾನ ಪಿಕ್ಸ್ ಇರುತ್ತಿತ್ತು. ಆದರೆ, ಈ ಬಾರಿ ಯಡಿಯೂರಪ್ಪ ಸರ್ಕಾರದಲ್ಲಿ ಹುಕ್ಕೇರಿ ಶಾಸಕ ಉಮೇಶ ಕತ್ತಿಗೆ ಸಚಿವ ಸ್ಥಾನ ಸಿಗದೆ ಇರುವುದರಿಂದ ಬಿಜೆಪಿ ಕಾರ್ಯಕರ್ತರು ಹಾಗೂ ಉಮೇಶ ಕತ್ತಿ ಅಭಿಮಾನಿಗಳು ನಿರಾಶೆಯಾಗಿದ್ದಾರೆ.
ಉಪ ಚುನಾವಣೆಯಲ್ಲಿ ಗೆದ್ದ 10 ನೂತನ ಶಾಸಕರಿಗೆ ಮಂತ್ರಿ ಪಟ್ಟ ಕಟ್ಟಲಾಗಿದೆ. ಆದರೆ, ಇದರ ಜೊತೆಗೆ ಮೂಲ ಬಿಜೆಪಿಯ ಮೂವರು ಶಾಸಕರನ್ನು ಮಂತ್ರಿ ಮಾಡುವ ಲೆಕ್ಕಾಚಾರದಲ್ಲಿದ್ದ ಸಿಎಂ ಯಡಿಯೂರಪ್ಪ. ಆದರೆ, ಇವರಿಗೆ ಹೈ-ಕಮಾಂಡ್ ಶಾಕ್ ನೀಡಿದ್ದು, ಮಂತ್ರಿಯಾಗುವ ಆಸೆಯಲ್ಲಿದ್ದ ಹುಕ್ಕೇರಿ ಶಾಸಕ ಉಮೇಶ ಕತ್ತಿ, ಅರವಿಂದ ಲಿಂಬಾವಳಿ ಹಾಗೂ ಸಿ.ಪಿ ಯೋಗೇಶ್ವರ ಕನಸು ನನಸಾಗದೆ ಉಳಿದಿದೆ.
ಸಂಕೇಶ್ವರ ಮತಕ್ಷೇತ್ರದಿಂದ 1990 ರಲ್ಲಿ ಸತತ ಮೂರು ಬಾರಿ ಆಯ್ಕೆಯಾಗಿದ್ದ ದಿ.ಮಲ್ಲಾರಿಗೌಡ ಪಾಟೀಲ ನೀರಾವರಿ ಸಚಿವರಾಗಿದ್ದರು, ನಂತರ ಆಯ್ಕೆಯಾದ ಮಾಜಿ ಸಚಿವ ಎ.ಬಿ. ಪಾಟೀಲ ವೈದ್ಯಕೀಯ ಹಾಗೂ ಗಣಿ ಭೂವಿಜ್ಞಾನ ಇಲಾಖೆಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಇದಾದ ನಂತರ 2004-06 ರ ವರೆಗೆ ಬಿಜೆಪಿ ಹಾಗೂ ಜೆಡಿಎಸ್ ದೋಸ್ತಿ ಸರಕಾರದಲ್ಲಿ ಹುಕ್ಕೇರಿಯಿಂದ ಆಯ್ಕೆಯಾಗಿದ್ದ ಶಶಿಕಾಂತ ನಾಯಕ ಸಚಿವರಾಗಿ ಮಿಂಚಿದ್ದರು.
2008 ರಲ್ಲಿ ಬಿಜೆಪಿ ಸೇರಿ ಗೆದ್ದು ಸಚಿವರಾಗಿ ಉಮೇಶ ಕತ್ತಿ ಅಧಿಕಾರ ನಡೆಸಿದ್ದರು. ಇದಾದ ನಂತರ ಹುಕ್ಕೇರಿ ತಾಲೂಕಿನ ಯಮಕಮರಡಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿ 2012 ರಿಂದ 2015 ರವರೆಗೆ ಸಚಿವರಾಗಿದ್ದರು. ನಂತರ 2018ರ ಕಾಂಗ್ರೆಸ್ - ಜೆಡಿಎಸ್ ದೋಸ್ತಿ ಸರಕಾರದಲ್ಲಿಯೂ ಸತೀಶ ಮಂತ್ರಿಯಾಗಿದ್ದರು. ಹೀಗೆ ಹುಕ್ಕೇರಿ ತಾಲೂಕಿನಲ್ಲಿ ಒಬ್ಬರಾದರೂ ಮಂತ್ರಿ ಸ್ಥಾನ ಅಲಂಕರಿಸಿ ಮಂತ್ರಿಗಿರಿ ಮಾಡಿದವರಿದ್ದಾರೆ.
ಆದರೆ ಈ ಬಾರಿ ಉಮೇಶ ಕತ್ತಿ ಅವರಿಗೆ ಸಚಿವ ಸ್ಥಾನ ನೀಡುತ್ತೇನೆ ಎನ್ನುವ ಮಾತುಗಳನ್ನು ಸಿಎಂ ಯಡಿಯೂರಪ್ಪ ಹೇಳುತ್ತಲೇ ಬರುತ್ತಿದ್ದರು. ಆದರೆ, ಕೊನೆಗೂ ಅವರಿಗೆ ಸಚಿವ ಸ್ಥಾನ ನೀಡದೆ ಇರುವುದರಿಂದ ಕ್ಷೇತ್ರದ ಜನತೆಗೆ ನಿರಾಶೆಯಾಗಿದೆ.
ಅದರಂತೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಶಾಸಕ ಉಮೇಶ ಕತ್ತಿ ಸಹೋದರ ಮಾಜಿ ಸಂಸದ ರಮೇಶ ಕತ್ತಿ ಅವರಿಗೂ ಕೂಡಾ ಚಿಕ್ಕೋಡಿ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಲು ಟಿಕೆಟ್ ನೀಡಲಿಲ್ಲ. ಎಲ್ಲೊ ಒಂದು ಕಡೆ ಕತ್ತಿ ಸಹೋದರರನ್ನು ಬಿಜೆಪಿ ಪಕ್ಷ ತುಳಿಯುತ್ತಿದೆ. ಕತ್ತಿ ಸಾಹುಕಾರ ಪ್ರಭಾವ ಕುಗ್ಗಿಸುವ ಯತ್ನ ಜಿಲ್ಲೆಯ ನಾಯಕರೇ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಹುಕ್ಕೇರಿ ಕ್ಷೇತ್ರದಲ್ಲಿ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ.