ಬೆಳಗಾವಿ: ನಗರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಳೆ ಆಗಮಿಸಲಿದ್ದು, ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಬೃಹತ್ ಸಮಾವೇಶಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಿಜೆಪಿ ಚಾಣಕ್ಯನನ್ನು ಹೃದಯಸ್ಪರ್ಶಿಯಾಗಿ ಸ್ವಾಗತಿಸುವ ಫ್ಲೆಕ್ಸ್, ಬ್ಯಾನರ್ಗಳು ನಗರದಲ್ಲಿ ರಾರಾಜಿಸುತ್ತಿವೆ.
ಬೆಂಗಳೂರಿನ ಎಚ್‍ಎಎಲ್ ವಿಮಾನ ನಿಲ್ದಾಣದಿಂದ ಬೆಳಗ್ಗೆ 9.35ಕ್ಕೆ ಹೊರಡುವ ವಿಶೇಷ ವಿಮಾನದ ಮೂಲಕ ಪ್ರಯಾಣ ಬೆಳೆಸಲಿರುವ ಅಮಿತ್ ಶಾ 10.15ಕ್ಕೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಬಳಿಕ 10.25ಕ್ಕೆ ಹೆಲಿಕಾಪ್ಟರ್ ಮೂಲಕ ಪ್ರಯಾಣ ಬೆಳೆಸುವ ಶಾ , ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದಲ್ಲಿ ನಿರಾಣಿ ಗ್ರೂಪ್ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಮಿತ್ ಶಾಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಡಿ.ವಿ. ಸದಾನಂದ ಗೌಡ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಾಥ್ ನೀಡಲಿದ್ದಾರೆ.
ಬಳಿಕ ಅಲ್ಲಿಂದ 12.25ಕ್ಕೆ ಹೊರಡುವ ಅಮಿತ್ ಶಾ ಮಧ್ಯಾಹ್ನ 1 ಗಂಟೆಗೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಮಧ್ಯಾಹ್ನ 1.15ಕ್ಕೆ ರಸ್ತೆ ಮಾರ್ಗವಾಗಿ ನಗರದ ಪ್ರವಾಸಿ ಮಂದಿರಕ್ಕೆ ಆಗಮಿಸಲಿದ್ದಾರೆ. ಅಲ್ಲಿ ಉತ್ತರ ಕರ್ನಾಟಕ ಶೈಲಿಯ ಭೋಜನ ಸವಿಯಲಿರುವ ಕೇಂದ್ರ ಗೃಹ ಸಚಿವರು, ಕೆಲಹೊತ್ತು ವಿಶ್ರಾಂತಿ ಪಡೆಯಲಿದ್ದಾರೆ. ಹೀಗಾಗಿ ಮಧ್ಯಾಹ್ನ 1.15ರಿಂದ 3.15ರ ಸಮಯವನ್ನು ಕಾಯ್ದಿರಿಸಲಾಗಿದೆ.
ಸುರೇಶ್ ಅಂಗಡಿ ಕುಟುಂಬಕ್ಕೆ ಸಾಂತ್ವನ!
ಬೆಳಗಾವಿ ಪ್ರವಾಸ ಕೈಗೊಂಡಿರುವ ಅಮಿತ್ ಶಾ, ಕೇಂದ್ರ ರೈಲ್ವೆ ಸಚಿವರಾಗಿದ್ದ ದಿ. ಸುರೇಶ್ ಅಂಗಡಿ ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ. ಮಧ್ಯಾಹ್ನ 3.20ಕ್ಕೆ ಪ್ರವಾಸಿ ಮಂದಿರದಿಂದ ಹೊರಡಲಿರುವ ಅಮಿತ್ ಶಾ, ಇಲ್ಲಿನ ವಿಶ್ವೇಶ್ವರಯ್ಯ ನಗರದ ಸಂಪಿಗೆ ರಸ್ತೆಯಲ್ಲಿರುವ ಸುರೇಶ್ ಅಂಗಡಿ ನಿವಾಸಕ್ಕೆ 3.30ಕ್ಕೆ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲಿದ್ದಾರೆ. ಮಧ್ಯಾಹ್ನ 3.55ಕ್ಕೆ ಸುರೇಶ್ ಅಂಗಡಿ ನಿವಾಸದಿಂದ ಹೊರಡಲಿರುವ ಅವರು ಸಂಜೆ 4.10ಕ್ಕೆ ನೇರವಾಗಿ ಜಿಲ್ಲಾ ಕ್ರೀಡಾಂಗಣಕ್ಕೆ ಆಗಮಿಸಲಿದ್ದಾರೆ. ಅಲ್ಲಿ ನಡೆಯಲಿರುವ ಬಿಜೆಪಿ ಜನಸೇವಕ ಸಮಾವೇಶದಲ್ಲಿ ಭಾಗವಹಿಸಿ, ಪ್ರಧಾನ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದ ಬಳಿಕ ಸಂಜೆ 5.40ಕ್ಕೆ ಜಿಲ್ಲಾ ಕ್ರೀಡಾಂಗಣದಿಂದ ನಿರ್ಗಮಿಸಲಿರುವ ಅಮಿತ್ ಶಾ ಕೆಎಲ್‍ಇ ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ 6.15ರಿಂದ 7.15ರವರೆಗೆ ಪಕ್ಷದ ಶಾಸಕರು, ಪದಾಧಿಕಾರಿಗಳ ಜೊತೆಗೆ ಸಭೆ ನಡೆಸಲಿದ್ದಾರೆ.
ಬೆಳಗಾವಿಗೆ ಸಚಿವರ ದಂಡು:
ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಳಗಾವಿಗೆ ಆಗಮಿಸುತ್ತಿರುವ ಹಿನ್ನೆಲೆ, ರಾಜ್ಯ ಸಚಿವ ಸಂಪುಟದಲ್ಲಿರುವ ಸಚಿವರ ದಂಡು ಕುಂದಾನಗರಿಯತ್ತ ಮುಖ ಮಾಡುತ್ತಿದೆ. ಡಿಸಿಎಂಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ ಜೊತೆಗೆ ಜಿಲ್ಲೆಯ ಐವರು ಸಚಿವರು, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಕೃಷಿ ಸಚಿವ ಬಿ.ಸಿ. ಪಾಟೀಲ್ ಸೇರಿದಂತೆ 20ಕ್ಕೂ ಅಧಿಕ ಸಚಿವರು, ನೆರೆ ಜಿಲ್ಲೆಯ ಶಾಸಕರು, ಸಂಸದರು ಬೆಳಗಾವಿಯಲ್ಲಿ ನಡೆಯಲಿರುವ ಜನಸೇವಕ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
ಎರಡೂವರೆ ಲಕ್ಷ ಜನ ಸೇರುವ ನಿರೀಕ್ಷೆ:
ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಬಿಜೆಪಿಯ ಜನಸೇವಕ ಸಮಾವೇಶದಲ್ಲಿ ಎರಡೂವರೆ ಲಕ್ಷ ಜನ ಸೇರುವ ನಿರೀಕ್ಷೆಯಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಕಾರ್ಯಕರ್ತರಿಗೆ ಇಲ್ಲಿನ ಫಿನಿಕ್ಸ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 11ರಿಂದ ಸಂಜೆ 6 ಗಂಟೆಯವರೆಗೆ ಊಟ ಲಭ್ಯವಿರಲಿದೆ. ಕೋವಿಡ್ ಮಾರ್ಗಸೂಚಿ ಜಾರಿಯಲ್ಲಿದ್ದರೂ ಬಿಜೆಪಿಯವರೇ ಲಕ್ಷಾಂತರ ಜನರನ್ನು ಸೇರಿಸುತ್ತಿದ್ದಾರೆ. ವಿಪರ್ಯಾಸವೆಂದ್ರೆ ಕಾರ್ಯಕ್ರಮಕ್ಕೂ ಜಿಲ್ಲಾಡಳಿತದಿಂದ ಅನುಮತಿ ಪಡೆದಿಲ್ಲ. ಈ ಬಗ್ಗೆ ಇಂದು ಮಾಧ್ಯಮಗೋಷ್ಠಿ ನಡೆಸಿದ ಬಿಜೆಪಿ ವಕ್ತಾರ ಕ್ಯಾ. ಗಣೇಶ ಕಾರ್ಣಿಕ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಕೋವಿಡ್ ನಿಯಮಗಳನ್ನು ಪಾಲಿಸಿಯೇ ಕಾರ್ಯಕ್ರಮ ನಡೆಸುತ್ತೇವೆ ಎಂದು ಸ್ಪಷ್ಟೀಕರಿಸಿದ್ದಾರೆ.
ಇದನ್ನೂ ಓದಿ:1,500 ಕೋಟಿ ರೂ. ವೆಚ್ಚದಲ್ಲಿ ಕ್ಷಿಪ್ರ ಕಾರ್ಯ ಪಡೆ ಘಟಕ ನಿರ್ಮಾಣ: ಗೃಹ ಸಚಿವ ಅಮಿತ್ ಶಾ