ಚಿಕ್ಕೋಡಿ: ಹಿಂದೂ ಎಂಬ ಶಬ್ದ ನಮ್ಮ ಶಬ್ದ ಅಲ್ಲವೇ ಅಲ್ಲ. ಹಿಂದೂ ಎಂಬ ಶಬ್ದ ಪರ್ಷಿಯನ್ನಿಂದ ಬಂದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಹಿಂದೂ ಪದದ ಅರ್ಥ ಬೇರೆಯೇ ಇದೆ : ನಿಪ್ಪಾಣಿ ಪಟ್ಟಣದಲ್ಲಿ ಮಾನವ ಬಂಧುತ್ವ ವೇದಿಕೆ ಕರ್ನಾಟಕ ವತಿಯಿಂದ ಹಮ್ಮಿಕೊಂಡಿದ್ದ, 'ಮನೆ ಮನೆಗೆ ಬುದ್ಧ, ಬಸವ, ಅಂಬೇಡ್ಕರ್ ವಿನೂತನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿಂದೂ ಶಬ್ದ ಪರ್ಷಿಯನ್ ಪದವಾಗಿದೆ. ಮತ್ತೆ ನಿಮ್ಮ ಪದ ಹೇಗೆ ಆಯ್ತು. ಈ ವಿಷಯದಲ್ಲಿ ಚರ್ಚೆ ಆಗಬೇಕು. ವಾಟ್ಸ್ಆ್ಯಪ್, ವಿಕಿಪೀಡಿಯಾ ನೋಡಿ, ನಿಮಗೆ ಅರ್ಥ ಆಗುತ್ತದೆ. ಎಲ್ಲಿಂದಲೋ ತಂದ ಪದವನ್ನು ನಮ್ಮ ಮೇಲೆ ಹೇರಲಾಗುತ್ತಿದೆ ಎಂದು ಹೇಳಿದರು.
ಮನುಷ್ಯರನ್ನು ಮನುಷ್ಯರನ್ನಾಗಿ ನೋಡಿ : ಮನುಷ್ಯರನ್ನು ಮನುಷ್ಯರನ್ನಾಗಿ ನೋಡುವುದು ಬಹಳ ಮುಖ್ಯ. ಅವನು ಆ ಜಾತಿ, ಈ ಜಾತಿ ಎಂದು ಮುಟ್ಟಿಸಿಕೊಳ್ಳುವುದಿಲ್ಲ.ಇಂತಹ ಅನಿಷ್ಟ ಪದ್ಧತಿಗಳು ಅಳಿಯಬೇಕು. ಅದಕ್ಕಾಗಿಯೇ ನಮ್ಮ ಹೋರಾಟ, ದಲಿತ ನೀರು ಮುಟ್ಟಿದರೆ ಅಶುದ್ಧ ಅಂತಾರೆ. ಅದೇ ಒಂದು ಎಮ್ಮೆ ಬೆಳಗ್ಗೆಯಿಂದ ಸಂಜೆವರೆಗೂ ನೀರಲ್ಲೇ ಇರುತ್ತೆ. ಇದರ ವಿರುದ್ಧ ನಮ್ಮ ಹೋರಾಟವಿದೆ ಎಂದರು.
ಗುಡಿ ಕಟ್ಟುವವರೂ ನಾವೇ, ದೇಣಿಗೆ ಕೊಡುವವರೂ ನಾವು. ದೇಗುಲ ಸಿದ್ದವಾದ ಮೇಲೆ ದಲಿತರಿಗೆ ಅಲ್ಲಿ ಪ್ರವೇಶ ಇಲ್ಲ ಅಂತೀವಿ. ದೇವಸ್ಥಾನದಲ್ಲಿ ಎಲ್ಲರಿಗೂ ಸಮಾನ ಅವಕಾಶ ಸಿಗಲಿ. ಶಿಕ್ಷಣ ಹಾಗೂ ಜ್ಞಾನ ಮಾತ್ರ ನಮ್ಮನ್ನು ಬದುಕಿಸಲು ಸಾಧ್ಯವಿಲ್ಲ. ಬದುಕಿನಲ್ಲಿ ಬರುವ ಜ್ಞಾನ ಬಹಳ ಮುಖ್ಯ ಎಂದು ಹೇಳಿದರು.
ಫುಲೆ ಇಲ್ಲದಿದ್ದರೆ ಶಿವಾಜಿ ಇತಿಹಾಸ ಇರ್ತಿರಲಿಲ್ಲ: ಮಹಾತ್ಮಾ ಜ್ಯೋತಿಬಾ ಫುಲೆ ಇಲ್ಲದಿದ್ದರೇ ಛತ್ರಪತಿ ಶಿವಾಜಿ ಅವರ ಇತಿಹಾಸ ಹೊರಗೆ ಬರುತ್ತಿರಲಿಲ್ಲ. ಅವರ ಇತಿಹಾಸವನ್ನು ಮುಚ್ಚಿಡಲಾಗಿತ್ತು. ಸತ್ಯ ಶೋಧಕ ಸಂಸ್ಥೆಯಿಂದ ಅವರ ಇತಿಹಾಸ ಹೊರಗೆ ಬಂದಿದೆ. ಶಿವಾಜಿ ಎಲ್ಲರನ್ನು ಸಮಾನತೆಯಿಂದ ನೋಡುತ್ತಿದ್ದರು. ವಿಶ್ವದಲ್ಲಿ ಶಿವಾಜಿ ಅವರ ಒಂದೇ ಪೇಂಟಿಂಗ್ ಇರುವುದು ಅದನ್ನು ಯಾರೋ ಕುಲಕರ್ಣಿ, ದೇಶಪಾಂಡೆ ಅವರು ತಯಾರಿಸಿಲ್ಲ. ಮೊಹಮ್ಮದ್ ಮದಾರಿ ಎನ್ನುವ ಚಿತ್ರಕಾರ ಆ ಪೇಂಟಿಂಗ್ ತಯಾರಿಸಿದ್ದರು ಎಂದು ಹೇಳಿದರು.
ಪ್ರತಾಪ್ಗಢದಲ್ಲಿ ಮಸೀದಿ ನಿರ್ಮಾಣ ಮಾಡಿದ್ದ ಶಿವಾಜಿ: ಪ್ರತಾಪಗಢ ಕೋಟೆಯಲ್ಲಿ ಶಿವಾಜಿ ಮಸೀದಿ ನಿರ್ಮಾಣ ಮಾಡಿರುವ ಇತಿಹಾಸವಿದೆ. ಅವರ ಕಾಲದಲ್ಲಿ ಸಮಾನತೆಯಿತ್ತು. ಆದರೆ ಈಗ ಮರಾಠಾ, ಮುಸ್ಲಿಂ, ದಲಿತರ ನಡುವೆ ದಿನನಿತ್ಯ ಜಗಳವಾಗುತ್ತಿವೆ. ನಮ್ಮ ಇತಿಹಾಸ ಬೇರೆ ಇದೆ. ನಮಗೆ ಬೇರೆ ಇತಿಹಾಸ ತೋರಿಸಲಾಗುತ್ತಿದೆ. ಬಸವಣ್ಣ, ಶಿವಾಜಿ, ಸಂತ ತುಕಾರಾಮ ಸೇರಿದಂತೆ ಮಹಾನ್ ಪುರುಷರ ಇತಿಹಾಸವನ್ನು ಬೇರೆ ರೀತಿ ತೋರಿಸಲಾಗುತ್ತಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ನಮಗೆ ಧರ್ಮಗಳನ್ನು ಒಡೆಯುವ ಹಿಂದುತ್ವ ಬೇಡ: ಮೈಸೂರಿನ ಉರಿಲಿಂಗ ಪೆದ್ದಿ ಮಠದ ಶ್ರೀ ಪರಮಪೂಜ್ಯ ಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿ, ಧರ್ಮಗಳನ್ನು ಒಡೆಯುವ ಹಿಂದುತ್ವ ಬೇಡ. ಒಡೆದಿರುವ ಜಾತಿಗಳನ್ನು ಒಗ್ಗೂಡಿಸುತ್ತಿರುವ ಮಾನವ ಬಂಧುತ್ವ ದಾರಿಯಲ್ಲಿ ಸಾಗಬೇಕು. ನಿಜವಾದ ಇತಿಹಾಸ ಬಚ್ಚಿಟ್ಟು, ಸುಳ್ಳು ಇತಿಹಾಸ ಸೃಷ್ಟಿಸಿದ್ದಾರೆ. ಇಂತವರಿಗೆ ಮತಗಳನ್ನು ಮಾರಿ ಅಂಬೇಡ್ಕರ್ ಗೆ ಜೈಕಾರ ಹಾಕಬೇಡಿ ಎಂದು ಸಲಹೆ ನೀಡಿದರು.
ಇದನ್ನೂ ಓದಿ :ಕಾಂಗ್ರೆಸ್ ಪಕ್ಷ ಬೆತ್ತಲಾಗಿದೆ ಎಂಬುದಕ್ಕೆ ಡಿಕೆಶಿ ಹೇಳಿಕೆ ಸಾಕ್ಷಿ: ಕೆ ಎಸ್ ಈಶ್ವರಪ್ಪ