ಹುಬ್ಬಳ್ಳಿ/ಬೆಳಗಾವಿ: ಉಡುಪಿ ಹಾಗೂ ಕುಂದಾಪುರ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಪ್ರವೇಶಿಸಲು ವಿದ್ಯಾರ್ಥಿಗಳಿಗೆ ನಿರಾಕರಿಸಿದ್ದು ಖಂಡನೀಯ. ಈ ಸಮಸ್ಯೆ ಬಗೆಹರಿಸಿ ವಿದ್ಯಾರ್ಥಿಗಳಿಗೆ ಪ್ರವೇಶಿಸಲು ಆನುಮತಿ ನೀಡಬೇಕು. ಇಲ್ಲವಾದರೆ ಹುಬ್ಬಳ್ಳಿಯಿಂದ ಉಡುಪಿಗೆ ಕಾಲೇಜಿನ ವಿರುದ್ಧ ಪ್ರತಿಭಟನೆ ನಡೆಸಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಮುಸ್ಲಿಂ ಮುಖಂಡರು, ತಹಶೀಲ್ದಾರರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಮಾಡಿದರು.
ಹಿಜಾಬ್ ಧರಿಸಿ ಕಾಲೇಜಿಗೆ ಪ್ರವೇಶಿಸಲು ನಿರ್ಬಂಧ ಹೇರಿರುವುದು ಕಾಲೇಜಿನ ಆಡಳಿತ ಮಂಡಳಿ ಹಾಗೂ ಕರ್ನಾಟಕ ಸರ್ಕಾರದ ನಡವಳಿಕೆ ಇಸ್ಲಾಂ ಧರ್ಮದ ವಿರುದ್ಧವಾಗಿದೆ. ಪದೇ ಪದೆ ನಮ್ಮ ಮೇಲೆ ಆರೋಪ ಮತ್ತು ದೌರ್ಜನ್ಯ ನಡೆಯುತ್ತಿದ್ದು, ಬೇಸರ ತಂದಿದೆ.
ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಹಕ್ಕಾಗಿದೆ. ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಹಿಜಾಬ್ ಎಂಬುದು ಹೆಣ್ಣುಮಕ್ಕಳ ಆಭರಣ. ಇದು ನಮ್ಮ ಮೂಲಭೂತ ಹಕ್ಕಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ನಾವು ಭಾರತದ ಪ್ರಜೆಯಾಗಿದ್ದು, ಇಲ್ಲಿಯೇ ಇರುತ್ತೇವೆ.
ಪಾಕಿಸ್ತಾನಕ್ಕೆ ಹೋಗುವುದಿಲ್ಲ. ಭಾರತದ ಮೇಲೆ ನಮಗೆ ಅಪಾರ ಗೌರವ, ವಿಶ್ವಾಸವಿದೆ. ಆದರೆ, ಈ ವಿವಾದ ನೋಡಿದರೆ 'ಬೇಟಿ ಬಚಾವೋ, ಬೇಟಿ ಪಡಾವೋ ಸುಳ್ಳು' ಎನಿಸುತ್ತಿದೆ ಎಂದರು. ಉಡುಪಿ ಹಾಗೂ ಕುಂದಾಪುರ ಕಾಲೇಜಿನ ವಿದ್ಯಾರ್ಥಿಗಳಿಗೆ 3 ದಿನದಲ್ಲಿ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ದೇಶಾದ್ಯಂತ ಹೋರಾಟ ಮಾಡಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಬುರ್ಖಾ ಧರಿಸಿ ಪ್ರತಿಭಟನೆ: ಶಾಲಾ - ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಎಐಎಂಐಎಂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಮಹಿಳೆಯರು ಬುರ್ಖಾ ಧರಿಸಿ ಪಾಲ್ಗೊಂಡಿದ್ದರು. ಹಿಜಾಬ್ ನಮ್ಮ ಹಕ್ಕು, ನಫರತ್ ಹಠಾವೋ ದೇಶ ಬಚಾವೋ ಎಂದು ಪ್ರತಿಭಟನಾ ನಿರತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಹಿಜಾಬ್ ನನ್ನ ಅಜ್ಜಿಯೂ ಧರಿಸುತ್ತಿದ್ದರು, ತಾಯಿಯೂ ಧರಿಸುತ್ತಿದ್ದರು. ನಾನು ಧರಿಸುತ್ತಿದ್ದೆ. ನನ್ನ ಮಗಳೇಕೆ ಧರಿಸಬಾರದು ಎಂದು ಪಾಲಿಕೆ ಸದಸ್ಯೆ ರೇಷ್ಮಾ ಪ್ರಶ್ನಿಸಿದರು. ಹಿಜಾಬ್ ಧರಿಸುವುದು ನಮ್ಮ ಸಂಪ್ರದಾಯ. ಶಾಲಾ - ಕಾಲೇಜುಗಳಲ್ಲಿ ಮುಸ್ಲಿಂ ಮಹಿಳೆಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡಬೇಕು. ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಎಐಎಂಐಎಂ ರಾಜ್ಯ ಕಾರ್ಯದರ್ಶಿ ಲತೀಫ್ ಖಾನ್ ಪಠಾಣ್, ಪಾಲಿಕೆ ಸದಸ್ಯ ಶಾಹೀದ್ ಖಾನ್ ಪಠಾಣ್, ರೇಷ್ಮಾ ಸೇರಿ ಹಲವರು ಭಾಗಿಯಾಗಿದ್ದರು.
ಇದನ್ನೂ ಓದಿ: ಕುಂದಾಪುರದಲ್ಲಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಕ್ಲಾಸಿಗೆ ನೋ ಎಂಟ್ರಿ.. ಕುಳಿತುಕೊಳ್ಳಲು ಪ್ರತ್ಯೇಕ ಕೊಠಡಿ!