ಅಥಣಿ(ಬೆಳಗಾವಿ): ಸೋಮವಾರ ಅಥಣಿ ಪಟ್ಟಣದ ಹೆಸ್ಕಾಂ ಕಚೇರಿಯಲ್ಲಿ ಓರ್ವ ಕಾರ್ಮಿಕ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇದೀಗ ಹೊಸತಿರುವು ಪಡೆದುಕೊಂಡಿದೆ. 'ಮೇಲಾಧಿಕಾರಿ, ಓರ್ವ ಲೈನ್ಮ್ಯಾನ್ನಿಂದ ಕಿರುಕುಳ ಹಾಗೂ ಭೇದಭಾವದಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ' ಎಂದು ಡೆತ್ ನೋಟ್ನಲ್ಲಿ ಮೃತ ಮಂಜುನಾಥ್ ಮುತ್ತಗಿ ಉಲ್ಲೇಖ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
![death note](https://etvbharatimages.akamaized.net/etvbharat/prod-images/kn-ath-01-13-suicide-twist-av-kac10006_13092022095740_1309f_1663043260_463.jpg)
ಘಟನೆ ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಆತ್ಮಹತ್ಯೆ ಮಾಡಿಕೊಂಡಿರುವ ಮಂಜುನಾಥ ಮುತ್ತಗಿ ಪತ್ನಿ ಲಕ್ಷ್ಮೀ ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, 'ನನ್ನ ಪತಿಯ ಸಾವಿಗೆ ಅಥಣಿ ಹೆಸ್ಕಾಂ ಅಧಿಕಾರಿ ನಜೀರ್ ಡಲಾಯತ್, ಲೈನ್‍ಮ್ಯಾನ್ ಬಸವರಾಜ ಕುಂಬಾರ' ಕಾರಣ ಎಂದು ಆರೋಪಿಸಿದ್ದಾರೆ.
ನನ್ನ ಪತಿಗೆ ಭೇದಭಾವ, ಮಾನಸಿಕ ಹಿಂಸೆ ಮತ್ತು ಕಿರುಕುಳ ನೀಡುತ್ತಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಲಕ್ಷ್ಮೀ ಉಲ್ಲೇಖಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಅಥಣಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಬೆಳಗಾವಿ: ಹೆಸ್ಕಾಂ ಆವರಣದಲ್ಲಿ ನೇಣಿಗೆ ಶರಣಾದ ನೌಕರ