ಚಿಕ್ಕೋಡಿ: ಕಳೆದ ಬಾರಿ ಪ್ರವಾಹದಿಂದ ಅತಿಯಾಗಿ ಹಾನಿಯಾಗಿದ್ದು, ಈ ಬಾರಿ ಪ್ರವಾಹಕ್ಕೂ ಮುಂಚಿತವಾಗಿ ಸರ್ಕಾರ ಎನ್‌ಡಿಆರ್‌ಎಫ್ ತಂಡ ನಿಯೋಜನೆ ಮಾಡಿದೆ. ಆದರೆ, ಈ ಕೊರೊನಾ ಮಹಾಮಾರಿಯ ನಡುವೆ ಎನ್‌ಡಿಆರ್‌ಎಫ್ ತಂಡದ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ತಾಲೂಕು ಆಡಳಿತ ಇವರಿಗೆ ಮೂರ್ನಾಲ್ಕು ದಿನಗಳಿಗೊಮ್ಮೆ ಆರೋಗ್ಯ ತಪಾಸಣೆ ನಡೆಸುತ್ತಿದೆ.
ತಾಲೂಕಿನ ಯಡೂರ ಗ್ರಾಮದ ಸಿದ್ದ ತೀರ್ಥ ಯಾತ್ರಿ ನಿವಾಸದಲ್ಲಿ 25ಕ್ಕೂ ಹೆಚ್ಚು ಎನ್‌ಡಿಆರ್‌ಎಫ್ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಸಿಬ್ಬಂದಿ ಆರೋಗ್ಯವನ್ನು ಚಿಕ್ಕೋಡಿ ತಹಶೀಲ್ದಾರ್ ಸುಭಾಷ್ ಸಂಪಗಾಂವಿಯವರು ವಿಚಾರಿಸಿ ಸ್ಥಳೀಯ ಆರೋಗ್ಯ ಸಿಬ್ಬಂದಿ ಕಡೆಯಿಂದ ಆರೋಗ್ಯ ತಪಾಸಣೆ ಮಾಡಿಸಿದರು.
ಎನ್‌ಡಿಆರ್‌ಎಫ್ ಸಿಬ್ಬಂದಿ ಆರೋಗ್ಯ ವಿಚಾರಿಸಿದ ತಹಶೀಲ್ದಾರ್ ಸಂಪಗಾಂವಿ, ಕೆಮ್ಮು, ನೆಗಡಿ, ಜ್ವರ ಸೇರಿದಂತೆ ಹಲವು ರೋಗಗಳಿಂದ ಸುರಕ್ಷಿತವಾಗಿ ಇರುವಂತೆ ಸೂಚನೆ ನೀಡಿದರು. ಕೋವಿಡ್ -19 ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಿದರು. ಎನ್‌ಡಿಆರ್‌ಎಫ್ ಸಿಬ್ಬಂದಿ ಆರೋಗ್ಯವನ್ನು ತಪಾಸಣೆ ಮಾಡುವಂತೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ ಆದೇಶಿಸಲಾಗಿದೆ ಎಂದರು.