ಬೆಳಗಾವಿ: ನೆರೆ ಪರಿಹಾರ ಬಿಡುಗಡೆಗಾಗಿ ಸಿಎಂ ಯಡಿಯೂರಪ್ಪನವರು ಮೂರು ದಿನ ಪಿಎಂ ಮೋದಿ ಬಾಗಿಲು ಕಾದರೂ ಮೂರು ಕಾಸಿನ ಕಿಮ್ಮತ್ತು ಸಿಗಲಿಲ್ಲ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಸಿಎಂ ಕಾಲೆಳೆದಿದ್ದಾರೆ.
ಬೆಳಗಾವಿಯಲ್ಲಿ ನಿನ್ನೆ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯದ ಸಿಎಂ ಬಗ್ಗೆ ಅಲ್ಲಿನ ನಾಯಕರಿಗೆ ಯಾವ ಭಾವನೆ ಇದೆ ಗೊತ್ತಾಗಲಿಲ್ಲ. ಯಡಿಯೂರಪ್ಪನವರು ಮೂರು ದಿನ ದೆಹಲಿಯಲ್ಲಿದ್ದರೂ ಈವರೆಗೆ ಪರಿಹಾರ ಹಣ ಬಿಡುಗಡೆ ಆಗಿಲ್ಲ. ಇದೇ ಮೊದಲ ಬಾರಿಗೆ 12 ಜಿಲ್ಲೆಗಳು ಭೀಕರ ನೆರೆಗೆ ತುತ್ತಾಗಿವೆ. ಲಕ್ಷಾಂತರ ಜನರ ಬದುಕು ಬೀದಿಗೆ ಬಂದಿದೆ. ಆರಂಭಿಕ ಹಂತದಲ್ಲಿ 10 ಸಾವಿರ ಕೋಟಿ ನೆರೆ ಪರಿಹಾರ ಬಿಡುಗಡೆ ಮಾಡುವಂತೆ ಕೇಂದ್ರವನ್ನು ಒತ್ತಾಯಿಸಿದರು. 25 ಜನ ಸಂಸದರು, 105 ಶಾಸಕರು ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ ಆದ್ರೆ ರಾಜ್ಯಕ್ಕೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ ಎಂದರು.
ನೆರೆ ನಷ್ಟವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ದೇವೇಗೌಡರು ಪ್ರಧಾನಿಯನ್ನು ಆಗ್ರಹಿಸಿದ್ದಾರೆ. ನೆರೆ ಪರಿಸ್ಥಿತಿಯನ್ನು ಕೇಂದ್ರ- ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಕೈಗೊಂಡು ಜನರ ನೋವಿಗೆ ಸ್ಪಂದಿಸಬೇಕು. ಕೇಂದ್ರ ಸರ್ಕಾರದಿಂದ ಈವರೆಗೂ ನಿರೀಕ್ಷಿತ ಪ್ರಮಾಣದಲ್ಲಿ ಪರಿಹಾರ ಬಿಡುಗಡೆ ಆಗದೇ ಇರುವುದು ದುರದೃಷ್ಟಕರ ಎಂದರು.
ನೆರೆ ಪರಿಸ್ಥಿತಿ ಅವಲೋಕಿಸಲು ಸಿಎಂ ಶೀಘ್ರವೇ ಸರ್ವಪಕ್ಷ ಸಭೆ ಕರೆಯಬೇಕು. ಸಭೆ ಬಳಿಕ ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕರೆದೊಯ್ಯಬೇಕು. ಇಷ್ಟು ದಿನ ಮಂತ್ರಿಮಂಡಲ ಇರಲಿಲ್ಲ, ಈಗ ಕ್ಯಾಬಿನೆಟ್ ರಚನೆಯಾಗಿದೆ. ಸಚಿವರು ನೆರೆಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಬೇಕು ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲ ಎಂದು ಸಿಎಂ ಹೇಳ್ತಿದ್ದಾರೆ. ಹಾಗಿದ್ದರೆ ಸಿಎಂ ಶಿಕಾರಿಪುರಕ್ಕೆ 2 ಸಾವಿರ ಕೋಟಿ ಎಲ್ಲಿಂದ ಬಿಡುಗಡೆ ಮಾಡಿಸಿದ್ದಾರೆ. ಸರ್ಕಾರದ ಖಜಾನೆ ಸುಭದ್ರವಾಗಿದೆ. ನೆರೆಪೀಡಿತ ಜಿಲ್ಲೆಗಳ ರೈತರು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಇರುವ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಬೇಕು. 320 ಗ್ರಾಮಗಳು ಸಂಪೂರ್ಣ ಮುಳುಗಡೆಯಾಗಿದ್ದು, ಸಂಪೂರ್ಣ ಬೆಳೆ ಹಾನಿ ಆಗಿದೆ. ಈ ಬಗ್ಗೆ ಕೇಂದ್ರ-ರಾಜ್ಯ ನೊಂದವರಿಗೆ ಸ್ಪಂದಿಸಬೇಕು ಎಂದರು ತಿಳಿಸಿದ್ದಾರೆ.