ಬೆಳಗಾವಿ: ಪೌರತ್ವ ಕಾಯ್ದೆ ಜಾರಿ ವಿರೋಧಿಸಿ ಕಾಂಗ್ರೆಸ್ ಹಾಗು ಎಡಪಕ್ಷಗಳು ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗೆ ಪ್ರಚೋದನೆ ನೀಡುತ್ತಿವೆ. ಸಾರ್ವಜನಿಕರ ಆಸ್ತಿ ಹಾನಿ ಮಾಡಿದರೆ ಪೊಲೀಸರು ಸುಮ್ಮನಿರಲು ಸಾಧ್ಯವಿಲ್ಲ. ನಿಮ್ಮ ಮನೆಗೆ ಯಾರಾದ್ರು ಕಲ್ಲು ಹೊಡೆಯೋಕೆ ಬಂದ್ರೆ ನೀವು ರಿವಾಲ್ವರ್ ಇಟ್ಕೊಂಡು ಪೂಜೆ ಮಾಡ್ತೀರಾ? ಎಂದು ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ ಅಂಗಡಿ ಗರಂ ಆಗಿ ಪ್ರತಿಕ್ರಿಯಿಸಿದ್ರು.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪೌರತ್ವ ಕಾಯ್ದೆ ವಿರುದ್ಧ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಇಬ್ಬರ ಮೇಲೆ ಗೋಲಿಬಾರ್ ಆಗಿದೆ. ಇಬ್ಬರ ಸಾವಿಗೆ ಪ್ರತಿಪಕ್ಷ ನಾಯಕರೇ ಕಾರಣ ಎಂದು ಆರೋಪಿಸಿದರು. ಪೌರತ್ವ ಕಾಯ್ದೆ ಜಾರಿಯಿಂದ ದೇಶದ ನಿವಾಸಿಗಳಿಗೆ ಯಾವುದೇ ಸಮಸ್ಯೆಯಿಲ್ಲ. ಪ್ರಚೋದನೆಗೆ ಒಳಗಾಗಿ ಸರ್ಕಾರದ ಆಸ್ತಿಪಾಸ್ತಿ ಹಾನಿ ಮಾಡುವ ಕೆಲಸಕ್ಕೆ ಯಾರೂ ಮುಂದಾಗಬಾರದು. ಹಾನಿ ಮಾಡಿದರೆ ಆಯಾ ರಾಜ್ಯ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದರು.