ಕನ್ನಡದ ನಂಬರ್ 1 ಧಾರಾವಾಹಿ ಗಟ್ಟಿಮೇಳ ಈಗ ಯಶಸ್ವಿ 350 ಸಂಚಿಕೆಗಳನ್ನು ಪೂರೈಸಿದೆ. ವಿಭಿನ್ನ ಕಥೆ, ಕೌಟುಂಬಿಕ ಕಥಾಹಂದರ, ವಿನೂತನ ಪಾತ್ರಗಳ ಮೂಲಕ ಈ ಧಾರಾವಾಹಿ ಆರಂಭದ ದಿನಗಳಿಂದಲೂ ಜನರ ಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು.
ಮಧ್ಯಮ ವರ್ಗದ ನಾಲ್ಕು ಜನ ಹೆಣ್ಣುಮಕ್ಕಳ ಕಥೆಯಾಗಿರುವ ಗಟ್ಟಿಮೇಳದಲ್ಲಿ ಅವರು ಪಡುವ ಪಾಡು, ಸಮಾಜದ ದೃಷ್ಟಿಕೋನ, ಬಡವರನ್ನು ಶ್ರೀಮಂತರು ಕಾಣುವ ರೀತಿ, ಹೆಣ್ಣು ಮಗಳೊಬ್ಬಳು ಸಂಸಾರವನ್ನು ನಿಭಾಯಿಸುವ ರೀತಿ ಇವೆಲ್ಲವನ್ನೂ ಎಳೆ ಎಳೆಯಾಗಿ ವೀಕ್ಷಕರ ಮುಂದೆ ತಂದಿದೆ ಗಟ್ಟಿಮೇಳ ಧಾರಾವಾಹಿ.
ಜೊತೆಗೆ ಅರಳು ಹುರಿದಂತೆ ಮಾತನಾಡುವ ರೌಡಿ ಬೇಬಿ ಅಮೂಲ್ಯ, ಗಾಂಭಿರ್ಯದ ಮೂರ್ತಿ ವೇದಾಂತ್, ಸಹನಾಮಯಿ ಆರತಿ, ತರಲೆ ಮಾಡುವ ಅದಿತಿ, ಅಣ್ಣನನ್ನು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವ ವಿಕ್ರಾಂತ್ ವೀಕ್ಷಕರಿಗೆ ತುಂಬಾ ಹತ್ತಿರವಾಗುತ್ತಾರೆ. ಇದರ ಜೊತೆಗೆ ತಾನು ಹೇಳಿದಂತೆ ಸರ್ವವೂ ನಡೆಯಬೇಕೆನ್ನುವ ಸುಹಾಸಿನಿ ಒಂದೆಡೆಯಾದರೆ, ಎಲ್ಲರ ಹಿತ ಬಯಸುವ ಪರಿಮಳಾ, ಸುಬ್ಬು ಪಾತ್ರಗಳು ಮತ್ತೊಂದೆಡೆ. ಹೀಗೆ ವಿನೂತನ ಪಾತ್ರಗಳ ಮೂಲಕ ವೀಕ್ಷಕರ ಮನದಲ್ಲಿ ಶಾಶ್ವತ ಸ್ಥಾನ ಪಡೆದಿದೆ ಗಟ್ಟಿಮೇಳ.
ಈಗಾಗಲೇ ಆರತಿ, ವಿಕ್ಕಿ ಮದುವೆ ನಡೆದಿದೆ. ಇದೀಗ ಅಮೂಲ್ಯ ಹಾಗೂ ವೇದಾಂತ್ ಸುತ್ತ ಕಥೆ ಸಾಗುತ್ತಿದೆ. ಇವರಿಬ್ಬರು ಒಂದಾಗುತ್ತಾರಾ? ಧ್ರುವನನ್ನು ಮನೆಯವರು ವಿರೋಧಿಸಲು ಕಾರಣವೇನು? ಧ್ರುವನಿಗೂ ವಸಿಷ್ಠ ಕುಟುಂಬಕ್ಕೆ ಏನು ಸಂಬಂಧ? ಎಂಬ ವಿಚಾರಗಳೆಲ್ಲಾ ಮುಂದಿನ ದಿನಗಳಲ್ಲಿ ಗೊತ್ತಾಗಬೇಕಿದೆ.
ನಾಯಕ ವೇದಾಂತ್ ಆಗಿ ರಕ್ಷ್ ಹಾಗೂ ನಾಯಕಿ ಅಮೂಲ್ಯಳಾಗಿ ನಿಶಾ ರವಿಕೃಷ್ಣನ್ ಅಭಿನಯಿಸಿದ್ದಾರೆ. ಉಳಿದಂತೆ ಅಭಿಷೇಕ್ ರಾಮದಾಸ್, ಅಶ್ವಿನಿ, ಪ್ರಿಯಾ ಆಚಾರ್, ಮಹತಿ, ಸುಧಾ ನರಸಿಂಹಮೂರ್ತಿ, ಸ್ವಾತಿ, ಅನ್ವಿತಾ ಸಾಗರ್, ಶರಣ್ಯಾ ಶೆಟ್ಟಿ ಮುಂತಾದವರು ಮುಖ್ಯ ಭೂಮಿಕೆಯಲ್ಲಿದ್ದಾರೆ.