ಬೆಳಗಾವಿ: ಹಿಪ್ಪರಗಿ ಆಣೆಕಟ್ಟೆಯ ಹಿನ್ನೀರಿನಿಂದ ಬಾಧಿತವಾಗಿರುವ ಗ್ರಾಮಗಳ ನೂರಾರು ಮನೆಗಳಿಗೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದೆ. ಜಿಲ್ಲೆಯ ಅಥಣಿ ತಾಲೂಕಿನ ತಹಶೀಲ್ದಾರ ಕಚೇರಿಯ ಆವರಣದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಅಧಿಕಾರಿಗಳು ಸರ್ವೆ ಮಾಡುವ ಸಂದರ್ಭದಲ್ಲಿ ತಾರತಮ್ಯ ಮಾಡುತ್ತಿದ್ದು, ಇದರಿಂದಾಗಿ ನಿಜವಾದ ಸಂತ್ರಸ್ತರಿಗೆ ಅನ್ಯಾಯವಾಗುತ್ತಿದೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಥಣಿ ತಾಲೂಕಿನ ಸಪ್ತಸಾಗರ, ತೀರ್ಥ, ಇಂಗಳಗಾಂವ, ದರೂರ, ಅವರಕೋಡ ಗ್ರಾಮಗಳಿಗೆ ಪರಿಹಾರ ಬಂದಿಲ್ಲ. ಹಾಗೆಯೇ ಕಾಗವಾಡ ತಾಲೂಕಿನ ಕುಸನಾಳ, ಮಳವಾಡ, ಬಣಜವಾಡ, ಕಾತ್ರಾಳ ಸೇರಿದಂತೆ ಇಪ್ಪತ್ತಾರು ಗ್ರಾಮಗಳ ಜನರಿಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಮತ್ತು ಕವಟಕೊಪ್ಪ ಗ್ರಾಮದ 162 ಕುಟುಂಬಗಳಿಗೆ ಪರಿಹಾರ ಕೊಟ್ಟಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಹಿಪ್ಪರಗಿ ಆಣೆಕಟ್ಟೆ ಹಿನ್ನೀರಿನಿಂದ ಬಾಧಿತವಾಗಿ ಹದಿನಾಲ್ಕು ವರ್ಷ ಕಳೆದರೂ ಸಮರ್ಪಕ ಪರಿಹಾರ ಸಿಕ್ಕಿಲ್ಲ. ಎರಡು ಬಾರಿ ಕೃಷ್ಣಾ ನದಿ ಪ್ರವಾಹದಿಂದ ಜನರು ಮನೆಗಳನ್ನು ಕಳೆದುಕೊಂಡಿದ್ದಾರೆ. ಜಮೀನುಗಳಲ್ಲಿ ಬೆಳೆ ಹಾನಿಗಳಾಗಿದೆ. ಪರಿಹಾರ ಕೇಳಿದರೆ ಸದ್ಯ ಪರಿಹಾರ ಕೊಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆಂದು ಪ್ರತಿಭಟನಾನಿರತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದ್ಯ ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದು, ನಮಗೆ ನ್ಯಾಯ ಸಿಗದಿದ್ದರೆ ಉಗ್ರವಾಗಿ ಹೋರಾಡಲಾಗುವುದು ಎಂದು ಪ್ರತಿಭಟನಾನಿರತರು ಎಚ್ಚರಿಸಿದ್ದಾರೆ.