ಬೆಳಗಾವಿ: ಬಿಜೆಪಿ ಬರುವ ಮುನ್ನ ನನಗೆ ದುಡ್ಡಿನ ಆಫರ್ ಕೊಟ್ಟಿದ್ದರು ಎಂದು ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಮಾಜಿ ಸಚಿವ ಶ್ರೀಮಂತ ಪಾಟೀಲ್ ಇಂದು ಯೂಟರ್ನ್ ಹೊಡೆದರು.
ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಬಿಜೆಪಿಯವರು ಯಾರೂ ಸಹ ನನ್ನ ಕಡೆ ಆಮಿಷ ತೋರಿಸಲು ಬಂದಿಲ್ಲ. ನಾನೇ ಅವರ ಬಳಿ ಹೋಗಿದ್ದೆ. ಮೋದೀಜಿಯವರ ಕೆಲಸ, ನಿಮ್ಮ ಪಕ್ಷದ ವಿಚಾರಕ್ಕೆ ಬೆಂಬಲ ಕೊಡುವೆ ಎಂದಿದ್ದೆ'.
'ನೀವು ಏನು ಅಪೇಕ್ಷೆ ಇಟ್ಟುಕೊಂಡು ಬಂದಿದ್ದೀರಿ ಎಂದು ಕೇಳಿದ್ದರು. ನಾನು ದುಡ್ಡಿಗೆ ಅಪೇಕ್ಷೆಪಡಲ್ಲ. ಸರ್ಕಾರ ರಚನೆ ಮಾಡಿದ್ರೆ ಜನಸೇವೆ ಮಾಡಲು ಒಳ್ಳೆಯ ಸ್ಥಾನಮಾನ ಕೊಡಿ ಎಂದಿದ್ದೆ. ಬಿಜೆಪಿಯವರು ದುಡ್ಡು ಆಫರ್ ಮಾಡಿರಲಿಲ್ಲ. ಅವರೇನು ನನ್ನ ಕಡೆ ಬಂದಿರಲಿಲ್ಲ, ನಾನೇ ಅವರ ಬಳಿ ಹೋಗಿ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದೆ' ಎಂದರು.
ನುಡಿದಂತೆ ನಡೆಯುವ ಭರವಸೆ ಇದೆ: ಶ್ರೀಮಂತ ಪಾಟೀಲ್‌ಗೆ ಸಚಿವ ಸ್ಥಾನ ನೀಡಲು ಮರಾಠ ಸಮುದಾಯದ ಆಗ್ರಹ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, 'ಮಾಡಬೇಕಾಗುತ್ತೆ ಮಾಡಿದ್ದಾರೆ. ನಮ್ಮ ಸಮಾಜದವರು ಅಷ್ಟೇ ಮಾಡಿಲ್ಲ. ಮುಸ್ಲೀಂ, ಜೈನ್ ಸೇರಿ ಬೇರೆ ಬೇರೆ ಸಮುದಾಯದವರು ಒತ್ತಾಯಿಸಿದ್ದಾರೆ. ಸಚಿವ ಸ್ಥಾನ ಕೊಡ್ತೀನಿ ಎಂದು ಮಾತು ಕೊಟ್ಟಿದ್ದು ಆ ಪ್ರಕಾರ ನಡೆದುಕೊಳ್ಳುತ್ತಾರೆಂಬ ಭರವಸೆ ಇದೆ' ಎಂದು ಹೇಳಿದರು.
ಬೆಳಗಾವಿ ಮಹಾನಗರದ ಮೇಯರ್ ಸ್ಥಾನವನ್ನು ಮರಾಠ ಸಮುದಾಯಕ್ಕೆ ನೀಡುವಂತೆ ಶ್ರೀಮಂತ ಪಾಟೀಲ್ ಆಗ್ರಹಿಸಿದ್ದಾರೆ. 'ಬೆಳಗಾವಿಯಲ್ಲಿ ಮರಾಠ ಸಮುದಾಯ ದೊಡ್ಡ ಸಂಖ್ಯೆಯಲ್ಲಿದೆ. ಎಲ್ಲರೂ ಬಿಜೆಪಿಗೆ ಬೆಂಬಲ ಕೊಟ್ಟಿದ್ದಾರೆ. ಹೀಗಾಗಿ ಸಮುದಾಯಕ್ಕೆ ಮೇಯರ್ ಸ್ಥಾನ ನೀಡಬೇಕಾದುದು ಸರ್ಕಾರದ ಜವಾಬ್ದಾರಿ ಆಗುತ್ತೆ. ಎಂಇಎಸ್ ಸೋಲು ಮರಾಠಿಗರ ಸೋಲು ಅಂತಾ ಶಿವಸೇನೆ ಬಿಂಬಿಸುತ್ತಿರುವ ಬಗ್ಗೆ ನಾನು ಮಾತನಾಡಲ್ಲ, ಸುಮ್ನೆ ಒಂದು ಇಶ್ಯೂ ತಯಾರಾಗುತ್ತದೆ' ಎಂದರು.
ಇದನ್ನೂ ಓದಿ: ಬಿಜೆಪಿ ಪಕ್ಷ ಸೇರ್ಪಡೆ ಸಮಯದಲ್ಲಿ ನನಗೆ ಹಣದ ಆಫರ್ ಬಂದಿತ್ತು: ಶ್ರೀಮಂತ ಪಾಟೀಲ್