ಚಿಕ್ಕೋಡಿ : ಕಾಂಗ್ರೆಸ್ನವರು ಹಣ, ಹೆಂಡ, ಜಾತಿಯ ವಿಷ ಬೀಜ ಬಿತ್ತಿ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಯಶಸ್ವಿಯಾಗುತ್ತಿದ್ದರು. ಇದೀಗ ಪ್ರಧಾನಿ ಮೋದಿಯವರ ಆಡಳಿತ ಎಲ್ಲದಕ್ಕೂ ಕಡಿವಾಣ ಹಾಕಿದೆ ಎಂದು ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ನಗರದ ಆರ್ ಡಿ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಂಡ ಜನಸ್ವರಾಜ್ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಬಿಎಸ್‌ವೈ, ಕೇದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಜನಪರ ಆಡಳಿತ ಕೊಡುವ ಮೂಲಕ ಕಳೆದ ಎಂಟು ವರ್ಷದಲ್ಲಿ ಇಡೀ ವಿಶ್ವವನ್ನೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ ಎಂದರು.
ವಜ್ರಗಳ ರಾಶಿಯೇ ತುಂಬಿಹುದು ನಿನ್ನಲ್ಲಿ ಏನಾದರೇನು, ಬಾಯಾರಿದವನಿಗೆ ನೀರಾದೆಯಾ? ಎಂದು ಕವನ ಹೇಳುವ ಮೂಲಕ ಕಾಂಗ್ರೆಸ್‌ಗೆ ಬಿಎಸ್‌ವೈ ಟಾಂಗ್ ನೀಡಿದರು. ಸಾಗರದಷ್ಟು ಕಾಂಗ್ರೆಸ್ ಬೆಳೆದಿದ್ದರೂ ಸಹ ಅದು ಯಾರ ಬಾಯಿಗೂ ಸಹ ನೀರಾಗದು. 75 ವರ್ಷದ ಕಾಂಗ್ರೆಸ್ ಆಡಳಿತ ಸಮುದ್ರದ ಉಪ್ಪು ನೀರಿನಂತಾಗಿದೆ ಎಂದರು.
ಪ್ರಧಾನಿಯವರು ಗ್ರಾಮೀಣ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಶೌಚಾಲಯ, ನೀರು, ಮನೆಗಳ ನಿರ್ಮಾಣಕ್ಕೆ ಒತ್ತು ನೀಡಿದ್ದಾರೆ. ಸದ್ಯ ರಾಜ್ಯಾದ್ಯಂತ ಮಳೆಯಾಗುತ್ತಿದೆ. ಕೇಂದ್ರದ ನಿಯೋಗ ಬರಲಿ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರಿಗೆ ಸ್ಪಂದಿಸುವ ಕೆಲಸ ಮಾಡಲಿ ಎಂದು ಸಮಾವೇಶದಲ್ಲಿ ಬಿಎಸ್‌ವೈ ಮನವಿ ಮಾಡಿಕೊಂಡರು.
ಇಡೀ ದೇಶದಲ್ಲಿ ಕಾಂಗ್ರೆಸ್ ನಿರ್ಣಾಮ ಆಗುತ್ತಿದೆ. ದೇಶದ ಜನರು ಕಾಂಗ್ರೆಸ್ನ ತಿರಸ್ಕಾರ ಮಾಡುತ್ತಿದ್ದಾರೆ. ಎಲ್ಲ ಜನಾಂಗವನ್ನು ಒಂದೇ ತಾಯಿಯ ಮಕ್ಕಳಂತೆ ಬಿಜೆಪಿ ನೋಡುತ್ತಿದೆ. ಹೀಗಾಗಿ, ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರಿಗೆ ಮೊದಲನೇ ಪ್ರಾಶಸ್ತ್ಯದ ಮತವನ್ನ ನೀಡಿ ಅವರನ್ನ ಆರಿಸಿ ತರುವ ಮೂಲಕ ದೊಡ್ಡ ಅಂತರದಲ್ಲಿ ಗೆಲ್ಲಿಸಬೇಕು ಎಂದರು.