ಬೆಳಗಾವಿ: ಅಕ್ರಮ ಬಡವಾಣೆಗಳ ಬಗ್ಗೆ ತಾಂತ್ರಿಕ ಸಮಿತಿ ರಚನೆ ಮಾಡುತ್ತಿದ್ದೇವೆ. ಸಮಿತಿ ವರದಿ ಬಂದ ಬಳಿಕ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು. ವಿಧಾನಸಭೆಯ ಕಲಾಪ ವೇಳೆ ಬೆಂಗಳೂರಿನ ಕಂದಾಯ ಜಾಗಗಳಲ್ಲಿ ಅಕ್ರಮ ಬಡಾವಣೆಗಳ ನಿರ್ಮಾಣ ಬಗ್ಗೆ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಪ್ರಸ್ತಾಪಿಸಿದರ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, ಏಕಾಏಕಿ ನಾವು ಮನೆ ಒಡೆಯಲು ಸಾಧ್ಯವಿಲ್ಲ. ಮನೆ ಒಡೆಯಲು ಹೋದ್ರೆ, ಪರಿಹಾರ ಕೇಳ್ತಾರೆ. ಸಾಕಷ್ಟು ವರ್ಷಗಳಿಂದ ಕಂದಾಯ ಜಾಗದಲ್ಲಿ ಅಕ್ರಮ ಮನೆಗಳು ನಿರ್ಮಾಣ ಆಗಿವೆ. ಈ ಬಗ್ಗೆ ಸಮಿತಿ ವರದಿ ತೆಗೆದುಕೊಂಡು ಸೂಕ್ತ ಕ್ರಮ ವಹಿಸುತ್ತೇವೆ. ಅಕ್ರಮ ರೆವಿನ್ಯೂ ಸೈಟ್ಗಳ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಇದಕ್ಕೂ ಮುನ್ನ ಎಸ್ ಆರ್ ವಿಶ್ವನಾಥ್, ಕಂದಾಯ ಜಾಗಗಳಲ್ಲಿ ಅಕ್ರಮ ಮನೆಗಳು ನಿರ್ಮಾಣ ಆದ್ರೆ ನಿಮ್ಮ ಬ್ರ್ಯಾಂಡ್ ಬೆಂಗಳೂರು ಮಾಡಲು ಸಾಧ್ಯವಿಲ್ಲ ಎಂದಿದ್ರು. ಇದಕ್ಕೆ ಧನಿಗೂಡಿಸಿದ ಶಾಸಕ ಎಸ್ ಟಿ ಸೋಮಶೇಖರ್, ಈ ವೇಳೆ ಅಕ್ರಮ ಬಡವಾಣೆ ನಿರ್ಮಾಣ ಮಾಡದಂತೆ ಒಂದು ಕಾಯ್ದೆ ತರುವಂತೆ ಆಗ್ರಹಿಸಿದರು.
ಅನೇಕ ಕಾರಣದಿಂದ ಎತ್ತಿನಹೊಳೆ ವಿಳಂಬ: ಎತ್ತಿನ ಹೊಳೆ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಪ್ರಗತಿ ಬಗ್ಗೆ ಗೌರಿಬಿದನೂರು ಶಾಸಕ ಕೆ ಎಚ್ ಪುಟ್ಟಸ್ವಾಮಿ ಗೌಡರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಗೃಹ ಸಚಿವ ಜಿ ಪರಮೇಶ್ವರ್, ಎತ್ತಿನಹೊಳೆ ಯೋಜನೆಗೆ ಈಗಿನ ಪರಿಷ್ಕೃತ ಅಂದಾಜು ವೆಚ್ಚ 23,253 ಕೋಟಿ ರೂ.ಗೆ ಏರಿದೆ. 9,141 ಎಕರೆ ಜಮೀನು ಬೇಕು. 3,687 ಎಕರೆ ಭೂಮಿ ಈ ಯೋಜನೆಗೆ ಸ್ವಾಧೀನ ಬಾಕಿ ಇದೆ. ರಾಷ್ಟ್ರೀಯ ಹಸಿರು ನ್ಯಾಯಾಲಯದಲ್ಲೂ ವ್ಯಾಜ್ಯ ಇದೆ. ಯೋಜನೆ ಮಾರ್ಗದಲ್ಲಿ ರಾಷ್ಟ್ರೀಯ ಗ್ಯಾಸ್ ಪೈಪ್ ಲೈನ್ ಹಾದು ಹೋಗಿದೆ. ಇನ್ನೂ ಅನೇಕ ಕಾರಣಗಳಿಂದ ಯೋಜನೆ ವಿಳಂಬ ಆಗಿದೆ. ಅನುದಾನದ ಲಭ್ಯತೆ ಮೇರೆಗೆ ಎತ್ತಿನ ಹೊಳೆ ಯೋಜನೆಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ತೇವೆ ಎಂದರು.
ಸಿಎಂ ಸಿದ್ದರಾಮಯ್ಯ ಭರವಸೆ: ಪದೇ ಪದೆ ವಿಷದ ನೀರು ಎನ್ನುತ್ತಿದ್ದರೂ, ಇದರಿಂದ ಜಾನುವಾರುಗಳು ಸತ್ತಿವೆಯಾ? ಇದಕ್ಕೆ ಕುಮಾರಸ್ವಾಮಿ ಅವರೇ ಉತ್ತರ ಕೊಡಿ, ವಿಶ್ವಸಂಸ್ಥೆಯವರು ಬಂದು ಪರೀಕ್ಷಿಸಿ ಹೋಗಿದ್ದಾರೆ. ಅವರನ್ನಾದರೂ ಕೇಳಿ ತಿಳಿದುಕೊಳ್ಳಿ. ಎತ್ತಿನಹೊಳೆ ಯೋಜನೆ ಜಾರಿ ಆಗೊಲ್ಲ ಎಂದಿದ್ದರು. ಆದರೆ ಅವರಿಗೆಲ್ಲ ಇದೀಗ ಉತ್ತರ ಸಿಕ್ಕಿದೆ ಎಂದು ತಿಳಿಸಿದರು. ನಮ್ಮ ಸರ್ಕಾರದ ಅವಧಿಯಲ್ಲೇ ಎತ್ತಿನ ಹೊಳೆ ಯೋಜನೆಯನ್ನು ಮುಗಿಸಿ ಈ ಭಾಗದ ಎಲ್ಲ ಜನರಿಗೆ ನೀರು ಕೊಟ್ಟೆ ಕೊಡುತ್ತೇವೆ. ಟೀಕೆ ಮಾಡುವವರಿಗೆ ಹೊಟ್ಟೆ ಉರಿ ಬರಿಸುವ ಕೆಲಸ ಮಾಡುತ್ತೇವೆ ಎಂದು ವಿರೋಧ ಪಕ್ಷಗಳ ಮುಖಂಡರಿಗೆ ಸಿದ್ದರಾಮಯ್ಯ ಇತ್ತೀಚೆಗೆ ತಿರುಗೇಟು ನೀಡಿದ್ದರು.
ಓದಿ: ಸದನದೊಳಗೆ ಬಿಟ್ಟು, ಹೊರಗೆ ಮಾತನಾಡಿದರೆ ಯಾರ್ರೀ ಕೇಳ್ತಾರೆ: ಡಿಸಿಎಂ ಡಿ ಕೆ ಶಿವಕುಮಾರ್