ಬೈಲಹೊಂಗಲ (ಬೆಳಗಾವಿ) : ಜನರ ಸಹಕಾರದ ಜತೆಗೆ ಅಧಿಕಾರಿಗಳು ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೊರೊನಾ ವೈರಸ್ ಹರಡುವಿಕೆಯನ್ನು ಜಿಲ್ಲೆಯಲ್ಲಿ ಸಂಪೂರ್ಣವಾಗಿ ತಡೆಗಟ್ಟಬೇಕು ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದರು.
ಪಟ್ಟಣದ ತಾಲೂಕು ಪಂಚಾಯತ್ ಸಭಾ ಭವನದಲ್ಲಿ ಇಂದು ನಡೆದ ಪೊಲೀಸರ ಹಾಗೂ ಉಪವಿಭಾಗ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಶಂಕಿತರು ಹೆಚ್ಚಾಗುತ್ತಿದ್ದು, ಬೇರೆ ರಾಜ್ಯ, ಜಿಲ್ಲೆ, ತಾಲೂಕುಗಳಿಂದ ಬರುವವರ ಮೇಲೆ ಹೆಚ್ಚಿನ ನಿಗಾವಹಿಸಬೇಕು. ಇದಲ್ಲದೇ ಕೊರೊನಾ ಸೋಂಕು ತಡೆಗೆ ಜನರ ಸಹಕಾರ ಮಹತ್ವದ್ದಾಗಿದ್ದು, ಸರ್ಕಾರದ ಸಲಹೆ, ಸೂಚನೆಗಳನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೆ ತರುವ ಮೂಲಕ ಜಿಲ್ಲೆಯನ್ನು ಕೊರೊನಾ ಮುಕ್ತ ಪ್ರದೇಶವನ್ನಾಗಿ ಮಾಡಬೇಕಿದೆ ಎಂದರು.
ಗ್ರಾಮೀಣ ಪ್ರದೇಶ ಸೇರಿದಂತೆ ಪಟ್ಟಣಗಳಲ್ಲಿನ ಮಸೀದಿಗಳಲ್ಲಿ ವಿನಾ ಕಾರಣ ಸಾಮೂಹಿಕ ಪ್ರಾರ್ಥನೆ ಮಾಡುವುದನ್ನು ತಕ್ಷಣ ನಿಲ್ಲಿಸಲು ಕ್ರಮ ಜರುಗಿಸಬೇಕು. ಪ್ರಮುಖ ಸ್ಥಳಗಳಲ್ಲಿ ಚೇಕ್ಪೋಸ್ಟ್ ಹಾಕಿ ಸಾರ್ವಜನಿಕ ಓಡಾಟವನ್ನು ನಿಲ್ಲಿಸಬೇಕು. ದಿನಸಿ, ತರಕಾರಿ ತೆಗೆದುಕೊಳ್ಳುವ ಸ್ಥಳಗಳಲ್ಲಿ ಸಾರ್ವಜನಿಕರು ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದರು.
ಕೊರೊನಾ ವೈರಸ್ ತಡೆಗೆ ಪೊಲೀಸರೊಂದಿಗೆ ಈಗಾಗಲೇ ಕೆಎಸ್ಆರ್ಟಿಸಿ ಸಿಬ್ಬಂದಿ ಕೈಜೋಡಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದೇ ರೀತಿ ಎಸ್ಸಿಸಿ, ಎನ್ಎಸ್ಎಸ್ ಪಡೆಗಳು ಬಳಸಿಕೊಳ್ಳಬೇಕು. ಪ್ರತಿ ಹಳ್ಳಿಗಳಲ್ಲಿಯೂ ಹೊರ ಜಿಲ್ಲೆಗಳಿಂದ ಬರುವವರು ಗೊತ್ತಾಗಬೇಕು. ಬಂದ ತಕ್ಷಣ ಅವರನ್ನು ಹೋಂ ಕ್ವಾರಂಟೈನ್ ಇಡುವಂತೆ ನೋಡಿಕೊಳ್ಳಬೇಕು ಎಂದರು.
ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ಡಿವೈಎಸ್ಪಿ ಜೆ.ಎಂ. ಕರುಣಾಕರ ಶೆಟ್ಟಿ, ತಹಶೀಲ್ದಾರ್ ಡಿ.ಹೆಚ್.ಹೂಗಾರ ಸೇರಿದಂತೆ ಇತರ ಇಲಾಖೆಯ ಅಧಿಕಾರಿಗಳು ಇದ್ದರು.