ಬೆಳಗಾವಿ: ಉತ್ತರ ಕರ್ನಾಟಕದ ಶಕ್ತಿದೇವತೆ ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಶ್ರಾವಣ ಮಾಸದ ಮೊದಲ ದಿನ ಭಕ್ತಸಾಗರವೇ ಹರಿದುಬಂತು. ಬೆಳಗ್ಗೆ ಸರತಿ ಸಾಲಿನಲ್ಲಿ ನಿಂತು ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು.
ಆಗಸ್ಟ್ 17ರಿಂದ ಸೆಪ್ಟೆಂಬರ್ 14ರ ವರೆಗೆ ಯಲ್ಲಮ್ಮಗುಡ್ಡದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ. ಇಂದು ರಾತ್ರಿ 2 ಗಂಟೆಗೆ ವಿಶೇಷ ಪೂಜೆ ನೆರವೇರಿದ್ದು, ಬೆಳಗ್ಗೆ 4 ಗಂಟೆಯಿಂದ ದೇವಿಯ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಲಾಯಿತು. ಬೆಳಗ್ಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯನ್ನು ಕಣ್ತುಂಬಿಕೊಂಡು ಇಷ್ಟಾರ್ಥಗಳನ್ನು ಈಡೇರಿಸುವಂತೆ ಬೇಡಿಕೊಂಡರು.
ಕುಂದಗೋಳ ತಾಲೂಕಿನಿಂದ ಆಗಮಿಸಿದ್ದ ಅನಿಲ ಪಾಟೀಲ ಮಾತನಾಡಿ, ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ನಾವು ಗುಡ್ಡಕ್ಕೆ ಬರುತ್ತೇವೆ. ಯಲ್ಲಮ್ಮ ತಾಯಿ ನಮಗೆ ಒಳ್ಳೆಯದು ಮಾಡಿದ್ದಾಳೆ. ದೇವಿಯ ಕೃಪೆ ನಮ್ಮನ್ನು ಉನ್ನತ ಸ್ಥಾನದಲ್ಲಿಟ್ಟಿದೆ ಎಂದರು.
ಶ್ರಾವಣ ಮಾಸದಲ್ಲಿ ನಿತ್ಯ ಬೆಳಗ್ಗೆ ಮತ್ತು ಸಂಜೆ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ರಾತ್ರಿ 2 ಗಂಟೆಗೆ ಆರಂಭವಾಗುವ ಪೂಜೆ 4 ಗಂಟೆಗೆ ಮುಗಿಯುತ್ತದೆ. ನಂತರ ದೇವಿಯ ದರ್ಶನಕ್ಕಾಗಿ ಭಕ್ತರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಪ್ರಸಾದ ವಿತರಿಸಲಾಗುತ್ತದೆ. ಬಗೆಬಗೆ ಹೂಗಳನ್ನು ಬಳಸಿ ದೇವಿಯ ಮೂರ್ತಿಗೆ ಅಲಂಕಾರ ಮಾಡಲಾಗುತ್ತದೆ. ನಸುಕಿನ ಜಾವದಿಂದ ಸಂಜೆಯ ಪೂಜೆಯವರೆಗೂ ಸಾವಿರಾರು ಜನರು ದೇವಿ ದರ್ಶನಾಶೀರ್ವಾದ ಪಡೆಯುವರು. ಸಂಜೆ ಪೂಜಾ ಕೈಂಕರ್ಯ ನೆರವೇರಿಸಿ ಮತ್ತೆ ದರ್ಶನಕ್ಕೆ ಅವಕಾಶ ಕೊಡಲಾಗುತ್ತದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಪಿ.ಬಿ ಮಹೇಶ ಮತ್ತು ಅರ್ಚಕ ಪಂಡಿತ ರಾಜಶೇಖರಯ್ಯ ತಿಳಿದರು.
ಒಂದು ತಿಂಗಳು ಸವದತ್ತಿ ಪಟ್ಟಣ, ಉಗರಗೋಳ, ಹಿರೇಕುಂಬಿ, ಹರ್ಲಾಪುರ, ಚಿಕ್ಕುಂಬಿ, ಯಡ್ರಾವಿ, ಬೆಡಸೂರಿನಿಂದ ನಿತ್ಯ ಸಾವಿರಾರು ಭಕ್ತರು ಕಾಲ್ನಡಿಗೆಯ ಮೂಲಕವೇ ನಸುಕಿನ ಜಾವ ಯಲ್ಲಮ್ಮನ ಗುಡ್ಡಕ್ಕೆ ಬಂದು ದೇವಿ ದರ್ಶನ ಪಡೆದು ತೆರಳುತ್ತಾರೆ. ದೇಶದ ವಿವಿಧೆಡೆ ನೆಲೆಸಿದ ಯಲ್ಲಮ್ಮನ ಭಕ್ತರು, ಶ್ರಾವಣ ಮಾಸದಲ್ಲಿ ತಪ್ಪದೇ ಯಲ್ಲಮ್ಮನಗುಡ್ಡಕ್ಕೆ ಬಂದು ದೇವಿಯ ದರ್ಶನ ಪಡೆಯುವುದು ವಾಡಿಕೆ. ಅದನ್ನು ಬಹುತೇಕರು ತಪ್ಪದೆ ಪಾಲಿಸುತ್ತಾರೆ. ತಮ್ಮ ಇಷ್ಟಾರ್ಥ ಈಡೇರಿದ್ದರಿಂದ ಹಲವರು ವಿವಿಧ ಕಾಣಿಕೆಗಳನ್ನು ಅರ್ಪಿಸುತ್ತಾರೆ. ಗುಡ್ಡದ ಪರಿಸರದಲ್ಲಿ ಒಲೆ ಹಾಕಿ ಅಡುಗೆ ಮಾಡಿ, ಪರಡಿ ತುಂಬಿ ನೈವೇದ್ಯ ಅರ್ಪಿಸುತ್ತಾರೆ.
ಈ ಬಾರಿ ಶಕ್ತಿ ಯೋಜನೆ ಹಿನ್ನೆಲೆಯಲ್ಲಿ ಪ್ರತಿ ವರ್ಷಕ್ಕಿಂತ ಭಕ್ತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಭಕ್ತರ ಬೇಡಿಕೆಯನುಸಾರ ಶ್ರಾವಣ ಮಾಸದಲ್ಲಿ ಯಲ್ಲಮ್ಮನಗುಡ್ಡಕ್ಕೆ ಬಸ್ ವ್ಯವಸ್ಥೆ ಕಲ್ಪಿಸುವುದಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಗಣೇಶ ರಾಠೋಡ ತಿಳಿಸಿದ್ದಾರೆ.
ಇದನ್ನೂಓದಿ: ಬಸವನಕುಡಚಿಯಲ್ಲಿ ನಿತ್ಯವೂ ಶ್ರಾವಣ ಸಂಭ್ರಮ: ಇಲ್ಲಿ ವರ್ಷದ 365 ದಿನವೂ ಮಾಂಸಾಹಾರ, ಮದ್ಯಪಾನ ನಿಷಿದ್ಧ!!