ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಜಲಟ್ಟಿ ಗ್ರಾಮದ 200 ರೈತರು ತಮ್ಮ ಜಮೀನುಗಳಿಗೆ ಕೆರೆ ನಿರ್ಮಾಣ ಮಾಡಬೇಕಾಗಿ ಸರ್ಕಾರಕ್ಕೆ ಕಳೆದ 27 ವರ್ಷಗಳ ಹಿಂದೆ ಮನವಿ ಸಲ್ಲಿಸಿದ್ದರು. ಅದಕ್ಕೆ ಒಪ್ಪಿದ ಸರ್ಕಾರ ಅಂದು ಸ್ಥಳೀಯರಿಂದ ಫಲವತ್ತಾದ 26 ಎಕರೆ ಜಮೀನನ್ನು ವಶಪಡಿಸಿಕೊಂಡು, ಗ್ರಾಮಕ್ಕೆ ಒಂದು ಕೆರೆ ನಿರ್ಮಾಣ ಮಾಡಿತ್ತು. ಸದ್ಯ ಆ ಕರೆ ನೀರಿನಿಂದ ತುಂಬಿ ತುಳುಕುತ್ತಿದೆ. ಆದ್ರೆ ಜಮೀನು ಕೊಟ್ಟ ರೈತರಿಗೆ ಪರಿಹಾರ ಮಾತ್ರ ದೊರಕಿಲ್ಲ.
ಕೆರೆ ನಿರ್ಮಾಣಕ್ಕಾಗಿ ಸ್ಥಳೀಯರ ಜಮೀನು ಖರೀದಿ ಮಾಡುವುದಾಗಿ ಹೇಳಿದ್ದ ಸರ್ಕಾರ ಕೆರೆ ನಿರ್ಮಾಣ ಮಾಡಿದ್ದು, ಜಮೀನು ಖರೀದಿ ಮಾಡದೆ ಹಾಗೆಯೇ ಬಿಟ್ಟಿದೆ. ಕಳೆದ 27 ವರ್ಷಗಳಿಂದಲೂ ಜಮೀನು ನೀಡಿದ ರೈತರು ಪರಿಹಾರಕ್ಕಾಗಿ ಕಾದು ಕುಳಿತಿದ್ದಾರೆ.
ಮಜಲಟ್ಟಿ ಗ್ರಾಮ ತೀರಾ ಬರಡು ಪ್ರದೇಶ ಹೊಂದಿರುವ ಗ್ರಾಮವಾಗಿದೆ. ಕೃಷ್ಣಾ ನದಿಗೆ ಪ್ರವಾಹ ಬಂದರೂ ಇಲ್ಲಿನ ಜನ ಮಾತ್ರ ಕುಡಿಯುವ ನೀರಿಗಾಗಿ ಪರಿತಪಿಸುತ್ತಾರೆ. ಬೇಸಿಗೆ ಬಂದ್ರೆ ಸಾಕು ಜನ ಬಿಂದಿಗೆಗಳನ್ನು ಹಿಡಿದು ಹತ್ತಾರು ಕಿ.ಮೀ. ವರೆಗೂ ಕುಡಿಯುವ ನೀರಿಗಾಗಿ ಸುತ್ತಾಡುತ್ತಾರೆ. ಇಂತಹ ಪರಿಸ್ಥಿತಿ ಕಂಡ ಜನರು 27 ವರ್ಷಗಳ ಹಿಂದೆ ತಮ್ಮೂರಿಗೆ ಒಂದು ಕೆರೆ ನಿರ್ಮಾಣ ಮಾಡಿ ಕೊಡುವಂತೆ ಸರ್ಕಾರಕ್ಕೆ ಒತ್ತಾಯಿಸಿದಾಗ ಸರ್ಕಾರ ಒಪ್ಪಿಗೆ ನೀಡಿ ಕೆರೆ ನಿರ್ಮಾಣ ಮಾಡಿತ್ತು. ಕಳೆದ 27 ವರ್ಷಗಳ ಹಿಂದೆ ನಿರ್ಮಾಣ ಮಾಡಿದ ಕೆರೆಗೆ ಫಲವತ್ತಾದ ಭೂಮಿ ನೀಡಿದ ರೈತರಿಗೆ ಮಾತ್ರ ಈವರೆಗೂ ಪರಿಹಾರ ಬಂದಿಲ್ಲ. 27 ವರ್ಷ ಕಳೆದರು ಕೂಡ ಕರೆ ನಿರ್ಮಾಣಕ್ಕೆ ಜಮೀನು ಕೊಟ್ಟ 20ಕ್ಕೂ ಹೆಚ್ಚು ಕುಟುಂಬಗಳು ಪರಿಹಾರಕ್ಕಾಗಿ ಅಲೆದಾಡುವಂತಾಗಿದೆ.
ಈವರೆಗೂ ಜಮೀನು ರೈತರ ಹೆಸರಿನಲ್ಲೇ ಉಳಿದುಕೊಂಡಿದ್ದು, ಸರ್ಕಾರ ಜಮೀನನ್ನು ವರ್ಗಾವಣೆ ಮಾಡಿಕೊಂಡಿಲ್ಲ. ಆದರೆ, ಪ್ರತಿ ವರ್ಷವೂ ಕೃಷ್ಣಾ ನದಿಯ ಮೂಲಕ ನದಿಗೆ ಪೈಪ್ಲೈನ್ ತಂದು ಪ್ರತಿ ವರ್ಷವೂ ಕರೆ ತುಂಬಿಸುತ್ತಲೇ ಬಂದಿದೆ. ಸರ್ಕಾರಕ್ಕೆ ರೈತರು ಎರಡು ಬಾರಿ ಕೆರೆ ಜಮೀನು ವಶಪಡಿಕೊಳ್ಳುವ ಬಗ್ಗೆ ಪತ್ರ ಬರೆದಿದ್ದರೂ ಕೂಡ ಸ್ಥಳೀಯಯ ಅಧಿಕಾರಿಗಳು ಮಾತ್ರ ಆ ಬಗ್ಗೆ ತಲೆಕೆಡಿಸಿಕೊಳ್ಳದೆ ಸುಮ್ಮನಿದ್ದಾರೆ ಎಂದು ರೈತರು ಆರೋಪಿಸುತ್ತಿದ್ದಾರೆ.