ಬೆಳಗಾವಿ: ಮಲಪ್ರಭಾ ಸಕ್ಕರೆ ಕಾರ್ಖಾನೆ ಕಳೆದ ಹಂಗಾಮಿನ ರೈತರ ಕಬ್ಬಿನ ಬಾಕಿ ಬಿಲ್ ಉಳಿಸಿಕೊಂಡಿದ್ದು, ಇಲ್ಲಿಯವರೆಗೂ ನೀಡಿಲ್ಲ. ಜಿಲ್ಲಾಧಿಕಾರಿಗಳು ಯಾವುದೇ ಕ್ರಮ ಕೈಗೊಂಡರು ಅದು ಕಾರ್ಯರೂಪಕ್ಕೆ ಬರುತ್ತಿಲ್ಲ. ಕೂಡಲೇ ರೈತರ ಬಾಕಿ ಬಿಲ್ ಕೊಡಿಸುವಂತೆ ಒತ್ತಾಯಿಸಿ ರೈತಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಪದಾಧಿಕಾರಿಗಳು, ರೈತರ ಕಬ್ಬಿನ ಬಾಕಿ ಬಿಲ್ ನೀಡುವಂತೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ರೈತರಿಗೆ ನೀಡಬೇಕಾದ ಬಾಕಿ ಬಿಲ್ ನೀಡುತ್ತಿಲ್ಲ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಕ್ಕರೆ ಕಾರ್ಖಾನೆಗಳನ್ನು ಮುಟ್ಟುಗೋಲು ಹಾಕಿದ್ದೇವೆ ಎಂದು ಸುಳ್ಳು ಭರವಸೆ ನೀಡುತ್ತಿದ್ದಾರೆ. ಆದರೆ ಇಲ್ಲಿಯವರೆಗೆ ರೈತರ ಬಾಕಿ ಬಿಲ್ ನೀಡಿಲ್ಲ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಚಾಲಕ ಗಣಪತಿ ಇಳಿಗೇರ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಜುಲೈ 21ರಂದು ಧಾರವಾಡದ ಕಲಾ ಭವನದಲ್ಲಿ ಬೃಹತ್ ರೈತ ಸಮಾವೇಶ ಹಮ್ಮಿಕೊಂಡಿದ್ದೇವೆ. ಮಹದಾಯಿ ಹಾಗೂ ಕಳಸಾ ಬಂಡೂರಿ ವಿಚಾರದ ಜೊತೆಗೆ ಸಾಲಮನ್ನಾ, ಕಬ್ಬಿನ ಬಾಕಿ ಬಿಲ್ ಸೇರಿ ಹಲವಾರು ಸಮಸ್ಯೆಗಳನ್ನು ರೈತರು ಎದುರಿಸುತ್ತಿದ್ದರೂ ಯಾವ ಅಧಿಕಾರಿಯು ಸರಿಯಾಗಿ ಸ್ಪಂದಿಸುತ್ತಿಲ್ಲ. ಇದೇ ಮನೋಭಾನೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.